ಸಮಗ್ರ ನ್ಯೂಸ್ : ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಬೆಂಗಳೂರಿನ ಡಾ. ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳ ವತಿಯಿಂದ ಅಯೋಧ್ಯೆ ರಾಮಮಂದಿರಕ್ಕೆ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮೂಲಕ ಸುಸಜ್ಜಿತ ಆ್ಯಂಬುಲೆನ್ಸ್ ಅನ್ನು ಶುಕ್ರವಾರ ಅಯೋಧ್ಯೆಯಲ್ಲಿ ಹಸ್ತಾಂತರಿಸಲಾಯಿತು.
ರಾಮಮಂದಿರಕ್ಕೆ ಪ್ರತಿನಿತ್ಯ ಬರುತ್ತಿರುವ ಲಕ್ಷಾಂತರ ಭಕ್ತರ ತುರ್ತು ಆರೋಗ್ಯ ಸೇವೆಗಾಗಿ ಆ್ಯಂಬುಲೆನ್ಸ್ ನನ್ನು ಒದಗಿಸುವ ಇಂಗಿತವನ್ನು ಸಂಸ್ಥೆಯ ಪ್ರಮುಖರಾದ ಪಟ್ಟಾಭಿರಾಮ್ ಅವರು ಶ್ರೀಗಳರಲ್ಲಿ ವ್ಯಕ್ತಪಡಿಸಿದ್ದರು. ಅದರಂತೆ ಸುಮಾರು 38 ಲಕ್ಷ ರೂ ವೆಚ್ಚದ ಸುಸಜ್ಜಿತವಾದ ನೂತನ ಆ್ಯಂಬುಲೆನ್ಸ್ ನನ್ನು ಅಯೋಧ್ಯೆಯಲ್ಲಿ ಶ್ರೀ ಪಟ್ಟಾಭಿರಾಮ್ ಮತ್ತು ಅನಿತಾ ಪಟ್ಟಾಭಿರಾಮ್ ಅವರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ಹಸ್ತಾಂತರಿಸಿದರು.
ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ಕೋಶಾಧಿಕಾರಿ ಸ್ವಾಮಿ ಗೋವಿಂದಗಿರಿ ಮಹಾರಾಜ್, ಅನಿಲ್ ಮಿಶ್ರಾ , ವಿಹಿಂಪ ರಾಷ್ಟ್ರೀಯ ಮುಖಂಡ ಗೋಪಾಲ್ ಜಿ, ಪೇಜಾವರ ಮಠದ ಅಧಿಕಾರಿಗಳಾದ ಶ್ರೀವತ್ಸ ತಂತ್ರಿ , ಶ್ರೀಗಳ ಆಪ್ತರಾದ ಶ್ರೀನಿವಾಸ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.