ಸಮಗ್ರ ನ್ಯೂಸ್ : ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ತಳ್ಳಲು ಬಿಜೆಪಿ ಹಿರಿಯ ನಾಯಕರು ಸಂಚು ರೂಪಿಸಿದ್ದಾರೆ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಿಯಾಗಿರುವ ರಾಘವ್ ಮಾಗುಂಟಾ ಅವರಿಗೆ ಕೇಜ್ರಿವಾಲ್ ಅವರ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಬಿಜೆಪಿ ಒತ್ತಡ ಹೇರುತ್ತಿದೆ ಎಂದು ಆರೋಪ ಮಾಡಿದ್ದಾರೆ.
ರಾಘವ್ ಮಾಗುಂಟಾ ಅವರ ತಂದೆ, ವೈಎಸ್‌ಆರ್ ಕಾಂಗ್ರೆಸ್ ಸಂಸದ ಮಾಗುಂಟಾ ಶ್ರೀನಿವಾಸುಲು ರೆಡ್ಡಿ ಅವರ ವಿರುದ್ಧ 2022ರ ಸೆಪ್ಟೆಂಬರ್ 16ರಂದು ಕ್ರಮ ಕೈಗೊಳ್ಳಲಾಗಿತ್ತು. ಈ ವೇಳೆ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಅವರನ್ನು ಒತ್ತಾಯಿಸಲಾಯಿತು. ಅವರು ನಿರಾಕರಿಸಿದಾಗ, ಅವರ ಮಗ ರಾಘವ್ ರೆಡ್ಡಿ ಅವರನ್ನು ಬಂಧಿಸಲಾಯಿತು. ನಿರಂತರ ವಿಚಾರಣೆಯ ಬಳಿಕ ರೆಡ್ಡಿ ಅವರು ಕೇಜ್ರಿವಾಲ್ ವಿರುದ್ಧ ಹೇಳಿಕೆಯನ್ನು ಬದಲಾಯಿಸಿದರು’ ಎಂದು ಸಿಂಗ್ ತಿಳಿಸಿದ್ದಾರೆ.
ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಲು ದೊಡ್ಡ ಪಿತೂರಿಯನ್ನು ನಡೆಸಲಾಗಿದೆ. ಅಬಕಾರಿ ನೀತಿ ಹಗರಣದ ಹಿಂದೆ ಬಿಜೆಪಿ ಕೈವಾಡ ಇದ್ದು, ಪಕ್ಷದ ಹಿರಿಯ ನಾಯಕರು ಶಾಮೀಲಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕೇಜ್ರಿವಾಲ್ ಅವರು ಪ್ರಾಮಾಣಿಕ ಜೀವನವನ್ನು ನಡೆಸಿದ್ದಾರೆ. ದೆಹಲಿಯ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಜನರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ನೀಡುವ ಗುರಿಯನ್ನು ಹೊಂದಿದ್ದರು ಎಂದು ಸಿಂಗ್ ಹೇಳಿದ್ದಾರೆ.