ಸಮಗ್ರ ನ್ಯೂಸ್ : ಹೊಸ ಮದ್ಯ ನೀತಿಯಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದ ಎಎಪಿ ನಾಯಕ ಹಾಗೂ ಸಂಸದ ಸಂಜಯ್ ಸಿಂಗ್ ಅವರಿಗೆ ಸುಪ್ರಿಂ ಕೋರ್ಟ್ ಇಂದು ಜಾಮೀನು ನೀಡಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರಿಗೆ ಇನ್ನು ಮುಂದೆ ಕಸ್ಟಡಿಯ ಅಗತ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿದ ನಂತರ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಮತ್ತು ಪ್ರಸನ್ನ ಬಿ ವರಾಲೆ ಅವರಿದ್ದ ತ್ರಿಸದಸ್ಯ ಪೀಠವು ಜಾಮೀನಿನ ಮೇಲೆ ಬಿಡುಗಡೆಗೆ ಆದೇಶಿಸಿತು.
ಇಡಿ ಬಂಧನ ಮತ್ತು ಜಾಮೀನು ಕೋರಿ ಸಂಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ನೇತೃತ್ವದ ತ್ರಿ ಸದಸ್ಯ ಪೀಠ, ಜಾಮೀನು ನೀಡಲು ಆಕ್ಷೇಪಗಳಿವೆಯೇ ಎಂದು ಇಡಿಯನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಇಡಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್-3 ಮತ್ತು 4ರ ಅಡಿಯಲ್ಲಿ ತನಿಖಾ ವರದಿಯಿಂದ ಉಂಟಾಗುವ ವಿಚಾರಣೆಯ ಬಾಕಿ ಇರುವಾಗ ಸಂಜಯ್ ಸಿಂಗ್‌ಗೆ ಜಾಮೀನು ನೀಡಲು ಆಕ್ಷೇಪಿಸುವುದಿಲ್ಲ ಎಂದು ಹೇಳಿತು.
ಇಡಿ ವಾದ ಆಲಿಸಿದ ಬಳಿಕ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತು. ಷರತ್ತುಗಳನ್ನು ಕೆಳಹಂತದ ನ್ಯಾಯಲಯ ನಿರ್ಧರಿಸಲಿದೆ ಎಂದು ಹೇಳಿತು. ಜಾಮೀನಿನ ಅವಧಿಯಲ್ಲಿ ಸಿಂಗ್ ಅವರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅರ್ಹರಾಗಿರುತ್ತಾರೆ. ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬಹಿರಂಗ ಹೇಳಿಕೆ ನೀಡಬಾರದು ಎಂದು ಕೋರ್ಟ್ ಸಂಜಯ್ ಸಿಂಗ್‌ಗೆ ಹೇಳಿದೆ.
ಸಂಜಯ್ ಸಿಂಗ್ ಪರ ವಾದ ಮಂಡಿಸಿದ ಅಭಿಷೇಕ್ ಮನುಸಿಂಘ್ವಿ, ಇತರೆ ಆರೋಪಿಗಳ ಹೇಳಿಕೆ ಆಧರಿಸಿ ದಾಳಿಯನ್ನು ನಡೆಸಲಾಗಿತ್ತು. ಈವರೆಗೂ ಯಾವುದೇ ನಗದು ಹಣ ಪತ್ತೆಯಾಗಿಲ್ಲ ಅಂತಹ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ವಾದಿಸಿದರು.