ಸಮಗ್ರ ನ್ಯೂಸ್ : ಕೊಡಗು ಸಮೃದ್ಧವಾಗಿ ಮಳೆ ಆರ್ಭಟವಾಗಲು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದಂಗಳವರು ವಾಮನ ತೀರ್ಥ ಸಂಸ್ಥಾನ ಶ್ರೀ ಶೀರೂರು ಮಠ ಉಡುಪಿ ಇವರು ನಿನ್ನೆಯಿಂದ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಮಳೆಗಾಗಿ ವಿಶೇಷ ಪೂಜೆ ನೆರವೇರಿಸಲು ವಾಸ್ತವ್ಯ ಹೂಡಿದ್ದಾರೆ.
ಇಂದು ಬೆಳಿಗ್ಗೆ ತಲಕಾವೇರಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ ನಂತರ ಭಾಗಮಂಡಲದಲ್ಲೂ ಕೂಡ ವಿಶೇಷ ಪ್ರಾರ್ಥನೆ ನೆರವೇರಿಸಿದ್ದರು. ರಾಜ್ಯ ಮುಜರಾಯಿ ಸಚಿವರನ್ನು ಭೇಟಿಯಾಗಿ ಅವರ ಸಮಾಕ್ಷಮದಲ್ಲಿ ಬೆಂಗಳೂರಿನಲ್ಲಿ ಪೂಜೆ ನೆರವೇರಿಸಿದ ನಂತರ ರಾಜರಾಜೇಶ್ವರ ದೇಗುಲದಿಂದ ಶ್ರೀರಂಗಪಟ್ಟಣಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಮಿಂದು ಶ್ರೀರಂಗನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ನಿನ್ನೆ ಭಾಗಮಂಡಲ ತಲಕಾವರಿಗೆ ಆಗಮಿಸಿ ಪೂಜೆ ನೆರವೇರಿಸಿ ವಾಸ್ತವ್ಯ ಹೂಡಿದ್ದಾರೆ.
ಯತಿಗಳು ಮಠದಲ್ಲಿ ಪೂಜೆ ನೆರವೇರಿಸುವ ಪಟ್ಟದ ದೇವರ ಮೂರ್ತಿಗಳ ಸಹಿತ ಆಗಮಿಸಿ ವಿಶೇಷ ಪೂಜೆಯನ್ನು ಮಳೆಗಾಗಿ ನೆರವೇರಿಸುತ್ತಿದ್ದಾರೆ. ನಾಳೆ ಬೆಳಿಗ್ಗೆ ಕಾವೇರಿ ವರುಣ ಪೂಜೆ, ವರುಣ ಜಪ, ನಾರಿಕೇಳ ಅಭಿಷೇಕ ಭಾಗಮಂಡಲದಲ್ಲಿ ನೆರವೇರಲಿದೆ. ಭಕ್ತಾದಿಗಳು ಎಳನೀರು ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಳೆಗಾಗಿ ವಿಶೇಷ ಪೂಜೆಯಲ್ಲಿ ಭಾಗವಹಿಸುವಂತೆ ಕೋರಿಕೊಂಡಿದ್ದಾರೆ.
ಖಂಡಿತವಾಗಿಯೂ ಪೂಜೆ ನೆರವೇರಿಸಿದ ನಂತರ ಕೊಡಗಿನಲ್ಲಿ ಮಳೆ ಬೀಳಲಿದೆ ಎಂದು ಸ್ವಾಮೀಜಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜೀವ ಜಲಕ್ಕೆ ವರುಣನ ಕೃಪೆಯಾಗಬೇಕು, ಕುಡಿಯುವ ನೀರಿಗೆ, ಕೃಷಿಗೆ ಮಳೆಯ ಮೂಲಕ ವರುಣನ ಆಗಮನವಾಗಬೇಕು. ಕೊಡಗಿನಲ್ಲಿ ಬೆಳೆಗಳು ಸಮೃದ್ಧವಾಗಬೇಕು ಎಲ್ಲರೂ ಸುಖಿಗಳಾಗಿ ಬದುಕಬೇಕು ಎಂಬ ಸಂಕಲ್ಪದೊಂದಿಗೆ ಈ ಪೂಜೆಯನ್ನು ನೆರವೇರಿಸಲಾಗುತ್ತಿದೆ ಎಂದು ಅವರು ಹೇಳಿದರು. ಇಂದಿನ ಪೂಜೆಯಲ್ಲಿ ಭಾಗಮಂಡಲ ಸುತ್ತಮುತ್ತಲಿನ ಭಕ್ತಾದಿಗಳು, ಪಾರುಪತ್ತೆಗಾರರಾದ ಪೊನ್ನಣ್ಣ, ಕ್ಷೇತ್ರ ಪುರೋಹಿತರಾದ ಹರೀಶ್ ಭಟ್ರು, ಮತ್ತಿತರು ಪಾಲ್ಗೊಂಡಿದ್ದರು. ಇಂದು ಸಂಜೆ ಕೂಡ ಜಪತಪ ನೆರವೇರಲಿದೆ.