ಸಮಗ್ರ ನ್ಯೂಸ್ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರು ದೇಶಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಪತ್ನಿ ಸುನಿತಾ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಇಂಡಿಯಾ ಒಕ್ಕೂಟದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಹೇಳುತ್ತಿದೆ. ಕೇಜ್ರಿವಾಲ್ ರಾಜೀನಾಮೆ ನೀಡಬೇಕಾ? ದೇಶಕ್ಕಾಗಿ ಕೇಜ್ರಿವಾಲ್ ಹೋರಾಡುತ್ತಿದ್ದಾರೆ. ಬಹುಶ: ಕೇಜ್ರಿವಾಲ್ ಹಿಂದೆ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು ಅನಿಸುತ್ತದೆ. ಹೋರಾಟದಲ್ಲಿ ಹುತಾತ್ಮರಾಗಿದ್ದ ಅವರು ಈಗಲೂ ಮತ್ತೆ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೇಜ್ರಿವಾಲ್ ಬರೆದ ಪತ್ರವನ್ನು ಓದಿದ ಅವರು, ನಾನು ಮತ ಕೇಳುವುದಿಲ್ಲ. ಭಾರತ ಒಂದು ಮಹಾನ್ ದೇಶವಾಗಿದ್ದು ತನ್ನದೇಯಾದ ಸಂಸ್ಕೃತಿ ಇದೆ. ಆದರೂ ಭಾರತದಲ್ಲಿ ಬಡತನ ಯಾಕಿದೆ? ನಾನು ಜೈಲಿನಲ್ಲಿ ಭಾರತ ಮಾತೆಗಾಗಿ ಯೋಚನೆ ಮಾಡುತ್ತೇನೆ. ಭಾರತ ಮಾತೆ ದು:ಖದಲ್ಲಿದ್ದಾಳೆ, ನೋವಿನಲ್ಲಿದ್ದಾಳೆ. ನಾವು ಸೇರಿ 140 ಕೋಟಿ ಜನರ ಹೊಸ ಭಾರತ ಕಟ್ಟೋಣ. ಬಡತನ, ನಿರುದ್ಯೋಗ ಇಲ್ಲದ ದೇಶ ಕಟ್ಟೋಣ. ಒಳ್ಳೆಯ ಶಿಕ್ಷಣ, ವೈದ್ಯಕೀಯ ಸೌಲಭ್ಯ ಸಿಗುವ ದೇಶ ನಿರ್ಮಿಸೋಣ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿಶ್ವ ನಾಯಕನಾಗುವ ದೇಶ ನಿರ್ಮಾಣ ಮಾಡೋಣ ಎಂದು ಹೇಳಿದರು.
ಕೇಜ್ರಿವಾಲ್ ರವರು 6 ಗ್ಯಾರಂಟಿ ಘೋಷಣೆ ಮಾಡಿದ್ದು, ಪೂರ್ತಿ ದೇಶದಲ್ಲಿ 24 ಗಂಟೆ ವಿದ್ಯುತ್, ಬಡವರಿಗೆ ವಿದ್ಯುತ್ ಉಚಿತ, ಪ್ರತಿ ಊರಿನಲ್ಲಿ ಒಳ್ಳೆಯ ಶಾಲೆ, ಪ್ರತಿ ನಗರದಲ್ಲಿ ಅತ್ಯುತ್ತಮ ಸರ್ಕಾರಿ ಆಸ್ಪತ್ರೆ ನಿರ್ಮಿಸಿ ಉಚಿತ ಚಿಕಿತ್ಸೆ, ರೈತರಿಗೆ ಸ್ವಾಮಿನಾಥನ್ ವರದಿ ಅನುಷ್ಠಾನ, ದೆಹಲಿ ಪೂರ್ಣ ರಾಜ್ಯದ ಅಸ್ತಿತ್ವ ನೀಡುವ ಘೋಷಣೆ ಮಾಡಿದ್ದಾರೆ ಎಂದು ಸುನಿತಾ ಕೇಜ್ರಿವಾಲ್ ತಿಳಿಸಿದರು.