Ad Widget .

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬೆಂಕಿ

ಸಮಗ್ರ ನ್ಯೂಸ್‌ : ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯ ವ್ಯಾಪ್ತಿಯ ಕೆ.ಕೆ.ಡ್ಯಾಂ ಬಳಿ ಅರಣ್ಯಕ್ಕೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಅರಣ್ಯ ನಾಶವಾಗಿದೆ.

Ad Widget . Ad Widget .

ಶನಿವಾರ ಬೆಳಗ್ಗೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಬೈಲೂರು ವಲಯದ ಕೆ.ಕೆ.ಡ್ಯಾಂ ಬಳಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಈ ವೇಳೆ ಮತ್ತೊಂದು ಕಡೆ ಬೆಂಕಿ ಕಾಣಿಸಿಕೊಂಡಿದ್ದು 60ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಗಾಳಿ ಇರುವುದರಿಂದ ಬೆಂಕಿಯ ಕೆನ್ನಾಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸಪಡುತ್ತಿದ್ದಾರೆ.

Ad Widget . Ad Widget .

ಬೆಂಕಿಯ ಕೆನ್ನಾಲಿಗೆ ಕುರುಚಲು ಗಿಡ, ಹುಲ್ಲು ಜಾತಿಯ ಗಿಡಗಳು ಸಂಪೂರ್ಣ ನಾಶವಾಗಿದೆ. ಈ ಭಾಗದಲ್ಲಿ ಹೆಚ್ಚಾಗಿ ಹುಲ್ಲಿನ ಜಾತಿಯ ಗಿಡಗಳಿದ್ದು ಬೇಸಿಗೆ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಒಣಗಿ ಹೋಗಿತ್ತು. ಇದರಿಂದಾಗಿ ಬೆಂಕಿ ವೇಗವಾಗಿ ಹರಡುತ್ತಿದ್ದು, ಬೈಲೂರು ವಲಯ ವ್ಯಾಪ್ತಿಯ ಕೆ.ಕೆ.ಡ್ಯಾಂ ಬಳಿ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆಯೂ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪುಣಜನೂರು, ಯಳಂದೂರು ವಲಯಗಳಲ್ಲೂ ಅರಣ್ಯಕ್ಕೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಅರಣ್ಯ ನಾಶವಾಗಿತ್ತು. ಈಗಲೂ ಇದು ಮುಂದುವರಿದಿದ್ದು ಈಗಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕೆ.ಕೆ.ಡ್ಯಾಂ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಕಡೆಗಳಿಗೆ ನಿಗಾ ಇಡಲು ಪ್ರೋಣ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬೆಂಕಿ ಹರಡುವ ಕಡೆಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಪ್ರೋಣ್ ಸಹಾಯದಿಂದ ಪರಿಶೀಲಿಸುತ್ತಿದ್ದಾರೆ. ಈಗಾಗಲೇ ಕೆಲವು ಕಡೆಗಳಲ್ಲಿ ಬೆಂಕಿ ಹತೋಟಿಗೆ ಬಂದಿದೆ. ಎಷ್ಟು ಎಕರೆ ಪ್ರದೇಶ ನಾಶವಾಗಿದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈಗಾಗಲೇ ಸ್ಥಳದಲ್ಲಿ ಸಿಬ್ಬಂದಿ ಬೀಡು ಬಿಟ್ಟು ಬೆಂಕಿ ನಂದಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕಿ ದೀಪಾ ಜೆ.ಕಂಟ್ರಾಕ್ಟರ್ ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *