ಸಮಗ್ರ ನ್ಯೂಸ್:ಮಡಿಕೇರಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮತದಾರರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ.
ಆ ನಿಟ್ಟಿನಲ್ಲಿ ಈಗಾಗಲೇ ರಂಗೋಲಿ ಸ್ಪರ್ಧೆ ಆರಂಭವಾಗಿದ್ದು, ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಪೂರ್ಣಗೊಂಡಿದೆ.
ಹಲವು ಯುವಜನರು ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಿದ್ದಾರೆ. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗಿದೆ. ಶನಿವಾರ ಸೋಮವಾರಪೇಟೆ ಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ರಂಗೋಲಿ ಸ್ಪರ್ಧೆ ನಡೆದಿದೆ.
ಇದೇ ಏಪ್ರಿಲ್, 26 ರಂದು ನಡೆಯುವ ಮತದಾನದಂದು 18 ವರ್ಷ ಪೂರ್ಣಗೊಂಡವರೆಲ್ಲರೂ ಮತಹಕ್ಕು ಚಲಾಯಿಸಬೇಕು. ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಮನೆಯಿಂದ ಮತಗಟ್ಟೆಗೆ ಬನ್ನಿ, ತಮ್ಮ ಹಕ್ಕು ಚಲಾಯಿಸಿ, ತಪ್ಪದೇ ಮತದಾನ ಮಾಡಿ ಎಂಬ ಘೋಷ ವಾಕ್ಯಗಳು ರಂಗೋಲಿ ಸ್ಪರ್ಧೆಯಲ್ಲಿ ಕಂಡುಬಂದವು.
ಮಾರ್ಚ್ 31 ರಂದು ಕಾರು ರ್ಯಾಲಿ: ಕೊಡಗು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ರೋಟರಿಯನ್ ಕೆ.ವಿಶ್ವನಾಥ ಶೆಣೈ ಅವರ ಸಂಯುಕ್ತಾಶ್ರಯದಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಅಭಿಯಾನವು ಮಾರ್ಚ್, 31 ರಂದು ಬೆಳಗ್ಗೆ 7 ಗಂಟೆಗೆ ನಗರದ ರಾಜಾಸೀಟು ಮುಂಭಾಗದಲ್ಲಿ ಕಾರು ರ್ಯಾಲಿ ಮತ್ತು ಬೀದಿನಾಟಕ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ವರ್ಣಿತ್ ನೇಗಿ, ವಿವಿಧ ಇಲಾಖೆ ಅಧಿಕಾರಿಗಳು ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಶೇಖರ್ ಅವರು ತಿಳಿಸಿದ್ದಾರೆ.