ಸಮಗ್ರ ನ್ಯೂಸ್: ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೇವಾಕಾರ್ಯದಲ್ಲಿ ಸಮಾಜಕ್ಕೆ ನಿರಂತರವಾಗಿ ಸ್ಪಂದಿಸುತ್ತಿರುವ ಯುವಶಕ್ತಿ ಸೇವಾಪಥವು ತನ್ನ ದ್ವೀತಿಯ ವಾರ್ಷಿಕೋತ್ಸವವನ್ನು “ಸೇವಾ ಸಂಭ್ರಮ” ಎಂಬ ವಿನೂತನ ಪರಿಕಲ್ಪನೆಯ ಮೂಲಕ ಕಟ್ಟದ ಪಡ್ಪು ಅರುಣೋದಯ ಸಭಾಭವನದಲ್ಲಿ ಆಚರಿಸಿಲಾಯಿತು.
ಸಮಾಜ ಬಂಧುಗಳಿಂದ ಸಂಗ್ರಹಿಸಿ , ಜಿಲ್ಲೆಯ ವಿವಿಧ ಭಾಗದ ಒಟ್ಟು 11 ಜನ ಅನಾರೋಗ್ಯ ಪೀಡಿತ ಫಲಾನುಭವಿಗಳಿಗೆ ನಾಲ್ಕು ಲಕ್ಷ ರೂಗಳ ಆರ್ಥಿಕ ಸಹಕಾರ ನೀಡುವುದರ ಮೂಲಕ ಯುವಶಕ್ತಿ ಸೇವಾಪಥವು ಶಕ್ತ ಸಮಾಜ ಮತ್ತು ಅಶಕ್ತ ಸಮಾಜದ ನಡುವಿನ ಕೊಂಡಿಯೆನಿಸಿತು.
ಈ ಸಂದರ್ಭದಲ್ಲಿ ಯುವಶಕ್ತಿ ರಕ್ತನಿಧಿಯ 10 ಸಾವಿರ ಯುನಿಟ್ ರಕ್ತದ ಪೂರೈಕೆಯ ಸಾರ್ಥಕತೆಯನ್ನು ಸಂಭ್ರಮಿಸಲಾಯಿತು. ಹಿಂದೂ ಯುವಸೇನೆಯ ಅಂಬ್ಯುಲೆನ್ಸ್‌ನಲ್ಲಿ ನಿರಂತರ ಸೇವೆಗೈಯುತ್ತಿರುವ ಅಪದ್ಬಾಂಧವ ಚಾಲಕ ರಘು ರವರನ್ನು ಮತ್ತು ನಿರಂತರ ಸಮಾಜ ಸೇವೆಗೈಯುವ ಮಂಗಳೂರು ಪರಿಸರದ ಯುವ ಕಾರ್ಪೋರೇಟರ್ ಗಣೇಶ ಕುಲಾಲ್ ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ವಾಸು ಪೂಜಾರಿಯವರು ಭಾಗವಹಿಸಿದರು. ಅತಿಥಿಗಳಾಗಿ ತೆಂಕ ಕಜೆಕಾರ್ ಪಂಚಾಯಿತಿ ಸದಸ್ಯ ಸತೀಶ್ ಪೂಜಾರಿ ಕಜೆಕಾರ್, ಪ್ರಗತಿಪರ ಕೃಷಿಕ ರೂಪೇಶ್ ಪೂಜಾರಿ ಬಡೆಕೊಟ್ಟು, ಅರುಣೋದಯ ಭಜನಾ ಮಂದಿರದ ಅಧ್ಯಕ್ಷ ಹೊನ್ನಪ್ಪ ಪೂಜಾರಿ ಮುದಲಾಡಿ ಮತ್ತು ಶಿವ ಛತ್ರಪತಿ ಸಂಸ್ಥೆಯ ಸುನೀಲ್ ಬಡೆಕೊಟ್ಟು ಪಾಲ್ಗೊಂಡು ಸೇವಾ ಸಂಭ್ರಮಕ್ಕೆ ಸಾಕ್ಷಿಯಾಗಿ ಶುಭ ಹಾರೈಸಿದರು.

ಹಿಂಜಾವೇ ಪ್ರಮುಖ ದಾಮೋದರ ನೆತ್ತರಕೆರೆ ಮುಖ್ಯ ಭಾಷಣಗೈದರು
ಸೇವಾಪಥ ನಡೆದು ಬಂದ ಸಿಂಹಾವಲೋಕನವನ್ನು ತಿಲಕ್ ಮುಂಡಾಲ ಮಂಡಿಸಿದರು. ದಿನೇಶ್ ಬಡೆಕೊಟ್ಟು ಪ್ರಾಸ್ತವಿಕ ಮಾತುಗಳನ್ನಾಡಿದರು.
ಯುವಶಕ್ತಿ ಬಂಧುಗಳು ತಮ್ಮ ಶುಭ ಸಂಭ್ರಮದಲ್ಲಿ ಸಮಾಜಕ್ಕೂ ಒಂದು ಪಾಲು ಯೆಂಬಂತೆ ಅರ್ಪಿಸಿದ ಶುಭನಿಧಿಯಲ್ಲಿ 3 ನೇ ಯೋಜನೆಯ ಮೂಲಕ 45,000/- ಮೌಲ್ಯದ ಶುದ್ದ ಕುಡಿಯುವ ನೀರಿನ ಘಟಕವನ್ನು ಸ್ಥಳೀಯ ಮಣಿನಾಲ್ಕೂರು ಸರ್ಕಾರಿ ಶಾಲೆಗೆ ಹಸ್ತಾಂತರಿಸಲಾಯಿತು. ಸದಾ ಜೊತೆಯಾಗುವ ಎಲ್ಲಾ ಮಿತ್ರಸಂಸ್ಥೆಗಳನ್ನು ಅಭಿನಂದಿಸಲಾಯಿತು. ಯುವಶಕ್ತಿ ಕಡೇಶಿವಾಲಯ(ರಿ) ವತಿಯಿಂದ ಆಯೋಜಿಸಲಾಗಿದ್ದ ಜೈಶ್ರೀರಾಮ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಯುವಶಕ್ತಿ ಸೇವಾಪಥದಿಂದ ಇಲ್ಲಿಯವರೆಗೆ 61 ಲಕ್ಷ ಸಮಾಜಕ್ಕೆ ಸಮರ್ಪಣೆಯಾಗಿದ್ದು ಮಾತೃಸಂಸ್ಥೆ ಯುವಶಕ್ತಿ ಕಡೇಶಿವಾಲಯದಿಂದ 17 ಲಕ್ಷ ಸಮಾಜದ ಅಶಕ್ತರಿಗೆ ಅರ್ಪಿಸಲಾಗಿದೆ
ಪ್ರಕಾಶ್ ಮುಂಡಾಲ ಸ್ವಾಗತಿಸಿ, ವಿಜಿತ್ ಸಂಪೋಳಿ ವಂದಿಸಿ, ದೇವದಾಸ್ ಅಬುರ ಕಾರ್ಯಕ್ರಮ ನಿರೂಪಿಸಿದರು. ಹಲವು ಗಣ್ಯರು ಸೇವಾಮಾಣಿಕ್ಯರು ಯುವಶಕ್ತಿಯ ಸದಸ್ಯರು ದ್ವಿತೀಯ ಸೇವಾಸಂಭ್ರಮಕ್ಕೆ ಸಾಕ್ಷಿಯಾದರು.