ಸಮಗ್ರ ನ್ಯೂಸ್: ಬೇಸಿಗೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ, ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.
2024ನೇ ಸಾಲಿನ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಬೇಡಿಕೆಗೆ ಅನುಗುಣವಾಗಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಗರಿಷ್ಠ ಉತ್ಪಾದನೆಗೆ ಒತ್ತು ನೀಡಲಾಗಿದೆ. ಉಷ್ಣ ವಿದ್ಯುತ್ ಸ್ಥಾವರಗಳು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಮುಖ್ಯ ಆಧಾರವಾಗಿದ್ದು, ರಾಜ್ಯದ 3 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಕಳೆದ ವರ್ಷ ಗರಿಷ್ಠ 22,000ಮಿ.ಯೂ. ವಿದ್ಯುತ್ ಉತ್ಪಾದನೆಯಾಗಿದೆ (ಹಿಂದಿನ ಗರಿಷ್ಠ- ಕಳೆದ ವರ್ಷ 18,000 ಮಿ.ಯೂ. ಆಗಿತ್ತು) ಪ್ರಸ್ತುತ 3,250 ಮೆ.ವ್ಯಾ ಅಥವಾ ದಿನಕ್ಕೆ 75 ಮಿ.ಯೂ.ನಂತೆ ವಿದ್ಯುತ್ ಉತ್ಪಾದನೆ ಆಗುತ್ತಿದೆ ಇದರ ಜೊತೆಗೆ ಉತ್ತರ ಪ್ರದೇಶ, ಪಂಜಾಬ್ ಜತೆಗೆ 2024ರ ಜೂನ್ನಲ್ಲೇ ದ್ವಿಪಕ್ಷೀಯ ವಿನಿಮಯ ಒಪ್ಪಂದ ಮಾಡಿಕೊಳ್ಳುವ ಮೂಲಕ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ರಾಜ್ಯಗಳಿಂದ ವಿನಿಮಯ ಆಧಾರದ ಮೇಲೆ ಪ್ರತಿದಿನ ಸರಾಸರಿ 900 ಮೆ.ವ್ಯಾ. ವಿದ್ಯುತ್ ಪಡೆಯಲಾಗುತ್ತಿದೆ.
ಎಂದರು.
ಜಲ ವಿದ್ಯುತ್ ಉತ್ಪಾದನೆ ಕೊಂಚ ಮಟ್ಟಿಗೆ ಕುಂಠಿತಗೊಂಡಿದ್ದರೂ, ಮಾರ್ಚ್ ಮತ್ತು ಏಪ್ರಿಲ್ನ ಹೆಚ್ಚಿನ ಬೇಡಿಕೆಯ ಅವಧಿಯಲ್ಲಿ ದಿನಕ್ಕೆ 20 ಮಿ.ಯೂ. ಅಥವಾ 1000 ಮೆ.ವ್ಯಾ.) ಲಭ್ಯವಿದೆ. ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ತಿನ ಅಗತ್ಯ ಇದೆ ಎಂದು ಮನವರಿಕೆ ಮಾಡಿಕೊಟ್ಟು, ಕೇಂದ್ರ ಗ್ರಿಡ್ ನಿಂದ ಈ ವರ್ಷವೂ (302 ಮೆ.ವ್ಯಾ.) ವಿದ್ಯುತ್ ಪಡೆಯಲಾಗಿದೆ. ಕಳೆದ ವರ್ಷ ಕೇಂದ್ರ ಗ್ರಿಡ್ ಗೆ ಒಪ್ಪಿಸಲಾಗಿದ್ದ 150 ಮೆಗಾವ್ಯಾಟ್ ವಿದ್ಯುಚ್ಛಕ್ತಿಯನ್ನೂ ವಾಪಸ್ ಪಡೆದಿದ್ದೇವೆ. ಈ ಹೆಚ್ಚುವರಿ ವಿದ್ಯುತ್, ಡಿಸೆಂಬರ್ ತಿಂಗಳಿನಿಂದ ರಾಜ್ಯಕ್ಕೆ ಲಭ್ಯವಾಗಿದೆ.
ಕೇಂದ್ರೀಯ ಉತ್ಪಾದನಾ ಕೇಂದ್ರ (ಸಿಜಿಎಸ್)ಗಳಿಂದ ರಾಜ್ಯದ ಪಾಲು (ಅಂದಾಜು 4,000 ಮೆ.ವ್ಯಾ.ವಿದ್ಯುತ್) ಪಡೆಯಲಾಗಿದ್ದು, ಅವರೊಂದಿಗೆ ಉತ್ತಮ ಸಮನ್ವಯವನ್ನು ಕಾಪಾಡಿಕೊಳ್ಳಲಾಗಿದೆ.
ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳು (ಬಹುತೇಕ ಖಾಸಗಿ ವಲಯ) ಸಾಮಾನ್ಯವಾಗಿ ‘ಮಸ್ಟ್ ರನ್’ ಆಧಾರದ ಮೇಲೆ ನಡೆಯುತ್ತವೆ. ಹವಾಮಾನ ಬದಲಾವಣೆಗೆ ಅನುಗುಣವಾಗಿ ಈ ಸ್ಥಾವರಗಳಿಂದ ಉತ್ಪಾದನೆ ಆಗುವ ವಿದ್ಯುತ್ ರಾಜ್ಯಕ್ಕೆ ಲಭ್ಯವಿರುತ್ತದೆ.