ಸಮಗ್ರ ನ್ಯೂಸ್: ಹಿಂದೂ – ಮುಸ್ಲಿಂ ಭಾವೈಕ್ಯತೆಗೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಾಕ್ಷಿಯಾಗಿದೆ.
ಬಂಟ್ವಾಳ ತಾಲೂಕಿನ ಕೆದಿಲ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಇತ್ತೀಚೆಗೆ ಬ್ರಹ್ಮಕಲಶೋತ್ಸವದಲ್ಲಿ ಮುಸ್ಲಿಮರು ಭಾಗವಹಿಸಿದ್ದರು. ಮುಸ್ಲಿಂ ಸಮುದಾಯದವರ ಸಹಕಾರಕ್ಕೆ ಪ್ರತಿಯಾಗಿ, ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.
ಸಾಮಾನ್ಯವಾಗಿ ಕರಾವಳಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೊರೆಕಾಣಿಕೆ ಸಲ್ಲಿಸುವ ಪದ್ದತಿಯಿದೆ. ಅದೇ ರೀತಿ ಕೆದಿಲ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆದಿತ್ತು. ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆ ಬರುವ ಸಂದರ್ಭ ಪರಿಸರದ ಮಸೀದಿ ವ್ಯಾಪ್ತಿಯ ಮುಸ್ಲಿಂ ಭಾಂದವರು ಅಲ್ಲಲ್ಲಿ ರಸ್ತೆಯಂಚಿನಲ್ಲಿ ನಿಂತು ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಶರಬತ್ತು ಹಂಚಿ, ಹೊರೆ ಕಾಣಿಕೆ ನೀಡುವ ಮೂಲಕ ಮೆರವಣಿಗೆಯ ಯಶಸ್ವಿಗೆ ಸಹಕರಿಸಿ ಸಾಮರಸ್ಯ ಮೆರೆದಿದ್ದರು.ಅಲ್ಲದೇ, ಪೇಟೆಯ ಪ್ರಮುಖ ಜಾಗದಲ್ಲಿ ಬ್ರಹ್ಮಕಲಶಕ್ಕೆ ಶುಭಕೋರಿ ಬ್ಯಾನರ್ ಕೂಡಾ ಅಳವಡಿಸಿದ್ದರು.
ಈ ಸೌಹಾರ್ದದ ವಾತಾವರಣ, ಮಾನವೀಯತೆ, ಬಂಧುತ್ವವನ್ನು ಕಂಡ ದೈವಸ್ಥಾನದ ಆಡಳಿತ ಸಮಿತಿಯವರು ಮುಸ್ಲಿಂ ಭಾಂದವರ ಮನೆ ಮನೆಗೆ ಹೋಗಿ ಬ್ರಹ್ಮಕಲಶೋತ್ಸವದ ಆಮಂತ್ರಣ ನೀಡಿ, ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದರು.
ಇದರಿಂದ ಪ್ರೇರಿತರಾದ ಮುಸ್ಲಿಂ ಭಾಂದವರೂ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸುವ ಮೂಲಕ ಭಾವೈಕ್ಯ ವಾತಾವರಣ ಸೃಷ್ಠಿಯಾಗಿತ್ತು. ಇಂತಹ ಸೌಹಾರ್ದತೆಯ ವಾತಾವರಣ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಮೆರೆದ ಸಾಮರಸ್ಯದ ಸವಿನೆನಪು ಶಾಶ್ವತವಾಗಿರಿಸಬೇಕು ಎಂಬ ದೃಷ್ಟಿಯಿಂದ ದೈವಸ್ಥಾನದ ಆಡಳಿತ ಸಮಿತಿ ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಪರಸ್ಪರ ಮಾನವೀಯತೆಯ ಸಂದೇಶ ಸಾರಿದೆ.
ರಂಜಾನ್ ಮಾಸದ ಈ ತಿಂಗಳಲ್ಲಿ ಕೆದಿಲ ಗ್ರಾಮದ ಪಾಟ್ರಕೋಡಿಯ ಜುಮಾ ಮಸೀದಿ ವಠಾರದಲ್ಲಿ, ಧೂಮಾವತಿ ದೈವಸ್ಥಾನ ಇಫ್ತಾರ್ ಕೂಟವನ್ನು ಆಯೋಜಿಸಿ, ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎನ್ನುವ ಸಂದೇಶವನ್ನು ಎರಡೂ ಸಮುದಾಯದವರು ಸಾರಿದರು.
ಇಫ್ತಾರ್ ಕೂಟದಲ್ಲಿ ದೈವಸ್ಥಾನ ಮತ್ತು ಮಸೀದಿಯ ಪ್ರಮುಖರು, ಹಿಂದೂ – ಮುಸ್ಲಿಂ – ಕ್ರೈಸ್ತ ಕೋಮಿನ ಜನರು ಭಾಗವಹಿಸಿ ಸೌಹಾರ್ದತೆಯನ್ನು ಮೆರೆದಿದ್ದಾರೆ. ಇದೇ ವೇಳೆ ಮಸೀದಿಯ ವತಿಯಿಂದ ದೈವಸ್ಥಾನದ ಪ್ರಮುಖರನ್ನು ಸನ್ಮಾನಿಸಲಾಯಿತು.