ಸಮಗ್ರ ನ್ಯೂಸ್: ಈಗಾಗಲೇ ದೆಹಲಿಯ ನೀರಿನ ಸಮಸ್ಯೆ ಕುರಿತು ಜೈಲಿನಿಂದಲೇ ಆದೇಶ ಹೊರಡಿಸಿ ತನಿಖೆಯಲ್ಲಿ ಇರುವ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಇದೀಗ ಜೈಲಿನಿಂದಲೇ ಮತ್ತೊಂದು (2ನೇ) ಆದೇಶ ಹೊರಡಿಸಿದ್ದಾರೆ.
ನವದೆಹಲಿಯ ಸರ್ಕಾರಿ ಆಸ್ಪತ್ರೆಗಳು ಮತ್ತು ಮೊಹಲ್ಲಾ ಕ್ಲಿನಿಕ್‍ಗಳಲ್ಲಿನ ಸಮಸ್ಯೆಗಳನ್ನು ತುರ್ತಾಗಿ ಸರಿಪಡಿಸುವಂತೆ ಅವರು ಆದೇಶ ಹೊರಡಿಸಿದ್ದು, ಈ ಆದೇಶ ಲಿಖಿತ ರೂಪದಲ್ಲಿ ಹೊರಡಿಸಲಾಗಿದೆಯೋ ಅಥವಾ ಮೌಖಿಕ ಸೂಚನೆ ಹೊರಡಿಸಿದ್ದಾರೋ ಎಂಬುದನ್ನು ಆಮ್ ಆದ್ಮಿ ಪಕ್ಷ ಖಚಿತಪಡಿಸಿಲ್ಲ.
ಜೈಲಿನೊಳಗೆ ಯಾವುದೇ ಸಾಮಗ್ರಿ ಕೊಂಡೊಯ್ಯಲು ಅನುಮತಿ ಇಲ್ಲದೇ ಇದ್ದರೂ ನೀರಿನ ಸಮಸ್ಯೆ ಬಗೆಹರಿಸಲು ಕೇಜ್ರಿವಾಲ್ ಲಿಖಿತವಾಗಿ ಆದೇಶ ಹೊರಡಿಸಿದ ಆದೇಶದ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ಆರಂಭಿಸಿದ ಬೆನ್ನಲ್ಲೇ ಹೊಸ ಆದೇಶ ನೀಡಲಾಗಿದೆ.
ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಆರೋಗ್ಯ ಖಾತೆ ಸಚಿವ ಸೌರಭ್ ಭಾರದ್ವಾಜ್, ನಗರದ ಆಸ್ಪತ್ರೆಯಲ್ಲಿ ಸಮಸ್ಯೆಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಮೊಹಲ್ಲಾ ಕ್ಲಿನಿಕ್‍ಗಳಲ್ಲಿ ಅಗತ್ಯ ಔಷಧ ಲಭ್ಯವಾಗುವಂತೆ ಮತ್ತು ಲ್ಯಾಬೋರೇಟರಿ ಪರೀಕ್ಷೆಗಳಿಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಕೇಜ್ರಿವಾಲ್ ಆದೇಶಿಸಿದ್ದಾರೆ.
ಈ ಕುರಿತು ಆರೋಗ್ಯ ಇಲಾಖೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಈ ನಡುವೆ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಬಂಧಿತರಾದವರು ಜೈಲಿನಿಂದಲೇ ಆಡಳಿತ ನಡೆಸಬಹುದೇ ಎಂಬ ವಿಷಯದ ಕುರಿತು ತಾನು ಗಮನಹರಿಸಿರುವುದಾಗಿ ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.