ಸಮಗ್ರ ನ್ಯೂಸ್: ಅರುಣಾಚಲ ಪ್ರದೇಶ ಚೀನಾದ ಭಾಗ. ಭಾರತ ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಚೀನಾ ಮತ್ತೆ ಕಿರಿಕ್ ಮಾಡಿದೆ. ಅರುಣಾಚಲ ಪ್ರದೇಶ ಭಾರತದ ನೈಸರ್ಗಿಕ ಭಾಗ. ಆ ರಾಜ್ಯದ ಮೇಲೆ ಚೀನಾ ಹಕ್ಕು ಸಾಧಿಸುವುದು ಅಸಂಬದ್ಧ ಎಂದು ಕೇಂದ್ರ ಸಚಿವ ಎಸ್.ಜೈಶಂಕರ್ ಹೇಳಿಕೆಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಗಡಿಯನ್ನು ಎಂದಿಗೂ ಇತ್ಯರ್ಥಪಡಿಸಲಾಗಿಲ್ಲ, ಅರುಣಾಚಲ ಪ್ರದೇಶಕ್ಕೆ ಚೀನಾದ ಅಧಿಕೃತ ಹೆಸರು ಜಂಗ್ಲಾನ್. ಭಾರತವು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿದೆ. ಅದು ಮೊದಲು ಚೀನಾದ ಭಾಗವಾಗಿತ್ತು ಎಂದು ಲಿನ್ ಹೇಳಿದ್ದಾರೆ.
ಚೀನಾವು ಈ ಪ್ರದೇಶದ ಮೇಲೆ ಪರಿಣಾಮಕಾರಿ ಆಡಳಿತವನ್ನು ಹೊಂದಿದೆ. ಅಕ್ರಮವಾಗಿ ವಶಪಡಿಸಿಕೊಂಡ ಭೂಪ್ರದೇಶವನ್ನು ಭಾರತವು 1987 ರಲ್ಲಿ ಅರುಣಾಚಲ ಪ್ರದೇಶ ಎಂದು ಕರೆಯಿತು. ನಾವು ಅವರ ಕ್ರಮಗಳ ವಿರುದ್ಧ ಬಲವಾದ ಹೇಳಿಕೆಗಳನ್ನು ನೀಡಿದ್ದೇವೆ. ಅವರ ಕ್ರಮವು ನಿಷ್ಪರಿಣಾಮಕಾರಿಯಾಗಿದೆ ಎಂದು ಲಿನ್ ಪ್ರತಿಪಾದಿಸಿದ್ದಾರೆ.
ಅರುಣಾಚಲ ಪ್ರದೇಶದ ಮೇಲಿನ ಹಕ್ಕು ಕುರಿತು ಚೀನಾ ಈ ತಿಂಗಳಲ್ಲಿ ನಾಲ್ಕನೇ ಬಾರಿ ಮಾತನಾಡಿದೆ. ಮಾ.9 ರಂದು ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಗ್ಗೆ ಭಾರತದೊಂದಿಗೆ ರಾಜತಾಂತ್ರಿಕ ಪ್ರತಿಭಟನೆ ಸಲ್ಲಿಸಿರುವುದಾಗಿ ಬೀಜಿಂಗ್ ಹೇಳಿತ್ತು.