ಸಮಗ್ರ ನ್ಯೂಸ್ ; ನೀಟ್ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ನೀಟ್‌ಗೆ ತಯಾರಿ ನಡೆಸುತ್ತಿದ್ದ 20 ವರ್ಷದ ಉರುಜ್ ಖಾನ್ ಎಂಬಾತ ನಗರದ ಬಾಡಿಗೆ ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
2024ರಲ್ಲಿ ಇಂತಹ ಘಟನೆ ಅನೇಕ ಸಂಭವಿಸಿದ್ದು, ಇದೀಗ 7ನೇ ಘಟನೆ ಇದಾಗಿದೆ. ಕಳೆದ ವರ್ಷದಲ್ಲಿ ವಿದ್ಯಾರ್ಥಿಗಳ ಸಾವಿನ ಸಂಖ್ಯೆ 29 ರಷ್ಟಿತ್ತು. ಉತ್ತರ ಪ್ರದೇಶದ ಕನೌಜ್ ನಿವಾಸಿಯಾಗಿರುವ ಮೃತ ಉರುಜ್ ಖಾನ್, ವಿಜ್ಞಾನನಗರ ಪ್ರದೇಶದ ಬಾಡಿಗೆ ಫ್ಲಾಟ್‌ನಲ್ಲಿ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉರುಜ್ ವಾಸವಿದ್ದ ಕಟ್ಟಡದ ಸಿಬ್ಬಂದಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ನೀಟ್ ಆಕಾಂಕ್ಷಿ ತೀವ್ರ ಹೆಜ್ಜೆ ಇಡಲು ಕಾರಣವೇನು ಎಂಬ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.
ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ತಮ್ಮ ವಶಕ್ಕೆ ಪಡೆದು ಸಮೀಪದ ಎಂಬಿಎಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಉರುಜ್ ಖಾನ್ ಅವರು 20 ದಿನಗಳ ಹಿಂದಷ್ಟೇ ಕೊಠಡಿಗೆ ಸ್ಥಳಾಂತರಗೊಂಡಿದ್ದರು ಆದರೆ ಕೋಟಾದಲ್ಲಿ ದೀರ್ಘಕಾಲ ತಂಗಿದ್ದರು ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.