ಸಮಗ್ರ ನ್ಯೂಸ್: ಮಾರುಕಟ್ಟೆಯಲ್ಲಿ ಹಸಿ ಕೊಕ್ಕೋ ಧಾರಣೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಪ್ರಸ್ತುತ ಪ್ರತೀ ಕೆ.ಜಿ.ಗೆ 200 ರೂ. ದಾಟಿದೆ. ಇದು ಇದು ವರೆಗಿನ ಸಾರ್ವಕಾಲಿಕ ದಾಖಲೆ ದರ. ಈ ಹಿಂದೆ ಪ್ರತೀ ಕೆ.ಜಿ.ಗೆ 125 ರೂ.ಗಳಿಗಿಂತ ಹೆಚ್ಚಾದುದಿಲ್ಲ.
ಇದರ ಜತೆಗೆ ಒಣ ಕೊಕ್ಕೊ ಧಾರಣೆಯೂ ಜಿಗಿದಿದ್ದು, ಬೆಳೆಗಾರರಲ್ಲಿ ಉಲ್ಲಾಸ ಮೂಡಿಸಿದೆ. ಹಸಿ ಕೊಕ್ಕೋ ಧಾರಣೆ ಕೆ.ಜಿ.ಗೆ ತೀರಾ ಕುಸಿತ ಕಂಡು ಹೆಚ್ಚೆಂದರೆ 75 ರೂ. ವರೆಗೆ ಇತ್ತು. ಹಿಂದೆ ಧಾರಣೆ ಕೆ.ಜಿ.ಗೆ 30 ರೂ. ವರೆಗೆ ಕುಸಿದು ಕೃಷಿಕರ ಆದಾಯ ಕಸಿದಿತ್ತು. ರೈತರು ಕೊಕ್ಕೋ ಬೆಳೆಯ ನಿರ್ವಹಣೆಗೆ ಸಾಕಷ್ಟು ಖರ್ಚು ಮಾಡುತ್ತಿದ್ದರೂ ಉತ್ತಮ ಧಾರಣೆ ಇರುತ್ತಿರಲಿಲ್ಲ.
ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಮಾ. 25ರಂದು ಹಸಿ ಕೊಕ್ಕೊ ಕೆ.ಜಿ.ಗೆ 205ಕ್ಕೆ ಖರೀದಿಯಾಗಿದೆ. ಪಂಜ ಮಾರುಕಟ್ಟೆಯಲ್ಲಿ 210 ರೂ.ಗೆ ಖರೀದಿಯಾಗಿದೆ. ಒಣ ಕೊಕ್ಕೊಗೆ ಎರಡು ದಿನಗಳ ಹಿಂದೆ ಇದ್ದ ಧಾರಣೆಯನ್ನು ಗಮನಿಸಿದರೆ ಕೆ.ಜಿ.ಯೊಂದಕ್ಕೆ 75 ರೂ.ಗಳಷ್ಟು ಏರಿಕೆ ಕಂಡಿದೆ. ಅಲ್ಲದೆ ಇನ್ನಷ್ಟು ಹೆಚ್ಚಳವಾಗುವ ಮುನ್ಸೂಚನೆಯನ್ನೂ ಮಾರುಕಟ್ಟೆ ನೀಡಿದೆ.
ವಿದೇಶಗಳಲ್ಲಿ ಕೊಕ್ಕೊ ಉತ್ಪಾದನೆ ಮತ್ತು ದಾಸ್ತಾನು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿರು ವುದು, ದೇಶೀಯವಾಗಿ ಕೊಕ್ಕೊ ಉತ್ಪಾದನೆಯಲ್ಲಿ ಕುಸಿತ ಆಗಿರುವುದರಿಂದ ಮಾರುಕಟ್ಟೆಯಲ್ಲಿ ಕೊಕ್ಕೊ ಕೊರತೆ ಕಂಡುಬಂದಿದ್ದು, ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಂತೆ ಕೊಕ್ಕೊ ಪೂರೈಕೆ ಇಲ್ಲದಿರುವುದರಿಂದ ಧಾರಣೆ ಹೆಚ್ಚಳದ ಅಸ್ತ್ರ ಪ್ರಯೋಗಿಸಲಾಗಿದೆ.
ಕೊಕ್ಕೋಗೆ 100 ರೂ. ದಾಟಿದ ಸಂದರ್ಭದಲ್ಲೇ ಉತ್ತಮ ಧಾರಣೆ ಎಂದು ಸಂಭ್ರಮಿಸಿದ್ದ ಕೃಷಿಕರು ಈಗ 200 ರೂ. ದಾಟಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಎಂಬ ಸಂತಸದಲ್ಲಿದ್ದಾರೆ. ಆದರೆ ಪ್ರಸ್ತುತ ಹಸಿ ಕೊಕ್ಕೋ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ. ಇರುವಲ್ಲಿಯೂ ಈಗಷ್ಟೇ ಬೆಳವಣಿಗೆಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಎಲ್ಲ ಕಡೆ ಬೆಳೆದು ಹಣ್ಣಾಗಲಿದ್ದು, ಆಗಲೂ ಇದೇ ರೀತಿಯ ಉತ್ತಮ ಧಾರಣೆ ಇದ್ದಲ್ಲಿ ಇನ್ನೂ ಉತ್ತಮ ಆದಾಯ ಸಿಗಲಿದೆ.