ಸಮಗ್ರ ನ್ಯೂಸ್ :ಬೀದಿನಾಯಿಗೆ ಊಟ ಹಾಕಿದ ಕಾರಣಕ್ಕಾಗಿ ದಲಿತ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಇಂದ್ರಾಳಿ ಹಯಗ್ರೀವ ನಗರದ ಚಂದ್ರಕಾಂತ ಭಟ್ ಎಂಬಾತನ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷ ವಿಶ್ವನಾಥ್ ಪೇತ್ರಿ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 20ರಂದು ರಾತ್ರಿ ಹಲ್ಲೆಗೊಳಗಾದ ಬೇಬಿ ಅವರು, ತನ್ನ ಮನೆಯ ಸಮೀಪದ ಬೀದಿನಾಯಿಗಳಿಗೆ ಊಟ ಹಾಕುತ್ತಿದ್ದ ವೇಳೆ ಆರೋಪಿ ಚಂದ್ರಕಾಂತ್ ಭಟ್ ಅವರು ರೀಪಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಗಂಭೀರ ಗಾಯಗೊಂಡ ಬೇಬಿ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಎಫ್‌ಐಆರ್‌ನಲ್ಲಿ ದೌರ್ಜನ್ಯಕ್ಕಾನುಗುಣವಾಗಿ ದಾಖಲಿಸಬೇಕಾದ ಸೆಕ್ಷನ್‌ಗಳನ್ನು ದಾಖಲಿಸಿಲ್ಲ. ಆದರೆ, ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಆರೋಪಿಗೆ ಜಿಲ್ಲಾಸ್ಪತ್ರೆಯಲ್ಲಿ ರಾಜ್ಯಾತಿಥ್ಯ ನೀಡಲಾಗುತ್ತಿದೆ ಎಂದು ದೂರಿದರು.
ಆರೋಪಿಯನ್ನು ಕೂಡಲೇ ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾ ಸರ್ಜನ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿ, ಜಿಲ್ಲಾಸ್ಪತ್ರೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಾಣಿದಯಾ ಸಂಘದ ಸದಸ್ಯೆ ರೋಶನಿ ಮಾತನಾಡಿ, ಪ್ರಾಣಿಗಳನ್ನು ಪೋಷಿಸುವ ಮಹಿಳೆಗೆ ಗಂಭೀರ ಹಲ್ಲೆ ಮಾಡಿದ ವ್ಯಕ್ತಿಗೆ ಅನಾರೋಗ್ಯದ ಕಾರಣ ನೀಡಿ ಆಸ್ಪತ್ರೆಯಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಬಾರದು. ಪೊಲೀಸರು ಆರೋಪಿ ವಿರುದ್ಧ ಕಠಿಣ ಕ್ರಮವನ್ನು ಜರಗಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಗಣೇಶ್ ಹೊಸಾಳ, ಪ್ರಮುಖರಾದ ಜ್ಯೋತಿ ಶಿರಿಯಾರ, ಬೇಬಿ ಕಾರ್ಕಳ, ಪ್ರಾಣಿದಯಾ ಸಂಘದ ಸದಸ್ಯರಾದ ಸದಾನಂದ್ ಎಸ್., ಮಂಜುಳಾ ಕರ್ಕೇರ ಇದ್ದರು.