ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ಬರ ಪರಿಹಾರ ನೀಡುತ್ತಿಲ್ಲ ಎಂದು ಸುಪ್ರೀಂಕೋರ್ಟ್‍ಗೆ ಕರ್ನಾಟಕ ಸರ್ಕಾರ ಅರ್ಜಿ ಸಲ್ಲಿಸಿದ ಕ್ರಮಕ್ಕೆ, ಈ ವಿಚಾರದಲ್ಲಿ ಯಾರಿಂದ ಲೋಪವಾಗಿದೆ ಎಂದು ನ್ಯಾಯಾಲಯವೇ ತೀರ್ಮಾನಿಸಲಿ ಎಂದು ತೀಕ್ಷ್ಣವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಅನುದಾನ ಬಂದಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಬೆಂಗಳೂರಿನ ಆರ್.ವಿ.ದಂತ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಚಿಂತಕರ ವೇದಿಕೆ ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಮೈಸೂರಿನ ಥಿಂಕರ್ಸ್ ಫೆÇೀರಂ ಸಂಘಟನೆ ಜತೆ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ವಿಚಾರ ತಿಳಿಸಿದರು.
ನ್ಯಾಯಾಲಯಕ್ಕೆ ಸತ್ಯಾಸತ್ಯತೆಯ ಅಂಕಿ-ಅಂಶಗಳನ್ನು ನೀಡುವುದು ವಿತ್ತ ಸಚಿವೆಯಾಗಿ ನನ್ನ ಕರ್ತವ್ಯ. ಅದನ್ನು ನಾನು ಸಲ್ಲಿಸುತ್ತೇನೆ. ಕರ್ನಾಟಕ ರಾಜ್ಯಕ್ಕೆ ನೀಡಬೇಕಾದ ಪ್ರತಿ ಪೈಸೆಯನ್ನು ಲೆಕ್ಕ ಹಾಕಿ ಸೂಕ್ತ ಸಮಯಕ್ಕೆ ಹಣಕಾಸು ಆಯೋಗ ನೀಡಿರುವ ವರದಿಯ ಶಿಫಾರಸಿನ ಆಧಾರದ ಮೇಲೆ ಬಿಡುಗಡೆ ಮಾಡಿದ್ದೇವೆ. ಅನುದಾನದ ವಿಚಾರದಲ್ಲಿ ಯಾರಿಂದ ಲೋಪವಾಗಿದೆ ಎಂದು ನ್ಯಾಯಾಲಯವೇ ತೀರ್ಮಾನಿಸಲಿ ತಿಳಿಸಿದ್ದಾರೆ.
ಹಣಕಾಸು ಆಯೋಗದ ಶಿಫಾರಸ್ಸಿನಲ್ಲಿ ಕರ್ನಾಟಕಕ್ಕೆ 5,495 ಕೋಟಿ ರು. ವಿಶೇಷ ಅನುದಾನ ನೀಡುವ ಬಗ್ಗೆ ಉಲ್ಲೇಖ ಇಲ್ಲ. ಆಯೋಗದ ವರದಿ ಮಾಡಿದ ಶಿಫಾರಸಿನ ಆಧಾರ ಮೇಲೆ ಕರ್ನಾಟಕಕ್ಕೆ ನೀಡಬೇಕಾಗಿದ್ದ ಪ್ರತಿ ಪೈಸೆಯನ್ನು ಲೆಕ್ಕ ಹಾಕಿ ಬಿಡುಗಡೆ ಮಾಡಲಾಗಿದೆ. 2017ರಿಂದ 2022ರ ನಡುವಿನ ರಾಜ್ಯದ ಜಿಎಸ್‍ಟಿ ಪಾಲಿನ ಅಷ್ಟೂ ಬಾಕಿ ಹಣ ನೀಡಲಾಗಿದೆ. ಅಲ್ಲದೇ, ಈ ವರ್ಷದ ಮಾರ್ಚ್‍ವರೆಗಿನ ಯಾವುದೇ ಜಿಎಸ್‍ಟಿ ಪರಿಹಾರವನ್ನು ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳಿದರು.
ಪ್ರಧಾನಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ, ದೇಶದಾದ್ಯಂತ 80 ಕೋಟಿ ಜನರು ಮತ್ತು ಬೆಂಗಳೂರು ನಗರದ 30.5 ಲಕ್ಷ ಜನರು ಪ್ರತಿ ತಿಂಗಳು ಉಚಿತ ಪಡಿತರ ಪಡೆಯುತ್ತಿದ್ದಾರೆ. ಬೆಂಗಳೂರು ನಗರದಲ್ಲಿಯೇ 14.68 ಲಕ್ಷ ಜನಧನ್ ಖಾತೆಗಳನ್ನು ತೆರೆಯಲಾಗಿದೆ ಎಂದರು. ಬೆಂಗಳೂರು ನಗರದಲ್ಲಿ 38.25 ಲಕ್ಷ ಫಲಾನುಭವಿಗಳಿಗೆ ಮುದ್ರಾ ಯೋಜನೆಯಡಿ 30,490 ಕೋಟಿ ರು. ನೀಡಲಾಗಿದೆ. ಕರ್ನಾಟಕ ಸರ್ಕಾರ ಎಸ್‍ಟಿ, ಎಸ್‍ಸಿ ಮತ್ತು ಮಹಿಳೆಯರಿಗೆ 10 ಲಕ್ಷದಿಂದ ಒಂದು ಕೋಟಿ ರು. ಸಾಲ ನೀಡುವ ಸ್ಟ್ಯಾಂಡ್-ಅಪ್ ಇಂಡಿಯಾ ಅಡಿಯಲ್ಲಿ ಕೇಂದ್ರದಿಂದ ಅನುದಾನವನ್ನು ಪಡೆದುಕೊಂಡಿದೆ. ಬೆಂಗಳೂರು ನಗರದಲ್ಲಿ ಈ ಯೋಜನೆಯಡಿ 467 ಕೋಟಿ ರು. ವಿತರಿಸಲಾಗಿದೆ. ಯೋಜನೆಯಡಿ ಬೆಂಗಳೂರಿನಲ್ಲಿ 4,429 ನೋಂದಾಯಿತ ಫಲಾನುಭವಿಗಳಿದ್ದಾರೆ. ಬೆಂಗಳೂರು ನಗರದ 1.25 ಲಕ್ಷ ಬೀದಿಬದಿ ವ್ಯಾಪಾರಿಗಳು ಪ್ರಧಾನಮಂತ್ರಿಯವರ ಸ್ವನಿಧಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.