Ad Widget .

ಹೋಳಿ‌; ಇದು ಬಣ್ಣದೋಕುಳಿ| ಕೆಟ್ಟದ್ದನ್ನು ಸುಟ್ಟು ಇಷ್ಟವಾಗಿರೋದನ್ನು ಮೂಟೆ ಕಟ್ಟೋಣ ಬನ್ನಿ…

ಸಮಗ್ರ ನ್ಯೂಸ್: ಉತ್ಸವಗಳು, ಹಬ್ಬಗಳು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಜೀವನದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಕಾರಣ ಮನುಷ್ಯನು ಸಹಜವಾಗಿ ಉತ್ಸವಪ್ರಿಯನಾಗಿರುವುದು. ಈ ಸತ್ಯವನ್ನು ಮಹಾಕವಿ ಕಾಳಿದಾಸನು ತನ್ನ ಶಾಕುಂತಲ ನಾಟಕದ 6ನೇ ಅಂಕದಲ್ಲಿ ಹೀಗೆ ವ್ಯಕ್ತಪಡಿಸಿದ್ದಾನೆ: ‘ಉತ್ಸವಪ್ರಿಯಾಃ ಖಲು ಮನುಷ್ಯಾಃ.’ ಉತ್ಸವಗಳು ಮನುಷ್ಯಜೀವನದಲ್ಲಿ ಒದಗುವ ಸಂತೋಷದ ಸಂದರ್ಭಗಳು. ಬಂಧು-ಬಳಗ, ಇಷ್ಟಮಿತ್ರರು ಎಲ್ಲ ಒಂದೆಡೆ ಕಲೆತು, ಐಂದ್ರಿಯಕ ಹಾಗೂ ಮಾನಸಿಕ ಆನಂದವನ್ನು ಅನುಭವಿಸುವುದಕ್ಕಲ್ಲದೆ, ಜೀವನದ ಕಷ್ಟಕಾರ್ಪಣ್ಯಗಳನ್ನು ಮರೆಯಲೂ ಉತ್ಸವಗಳು, ಹಬ್ಬ-ಹರಿದಿನಗಳು ಕಾರಣವಾಗುತ್ತವೆ. ಮಾತ್ರವಲ್ಲ, ಅವು ನಮ್ಮ ಆಂತರ್ಯವನ್ನು ಸಮೃದ್ಧಗೊಳಿಸುವ ಸಾಧನಗಳೂ ಆಗಿವೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಜಗತ್ತಿನಲ್ಲೆ ಅತ್ಯಂತ ವರ್ಣಮಯ ಹಬ್ಬ ಎಂದರೆ ಅದು ನಮ್ಮ ದೇಶದಲ್ಲಿ ಆಚರಿಸಲ್ಪಡುವ ಹೋಳಿಹಬ್ಬ. ಪ್ರತಿ ವರ್ಷ ಹೋಳಿಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶವ್ಯಾಪಿಯಾಗಿ ಜಾತಿಭೇದ, ಲಿಂಗಭೇದ ಮರೆತು ಜನರು ಪರಸ್ಪರ ಬಣ್ಣಗಳನ್ನು ಎರಚಾಡುತ್ತ ಹಾಡುತ್ತ ಕುಣಿಯುತ್ತ ಸಂಭ್ರಮಿಸುವ ಕಾರಣದಿಂದ ಈ ಹಬ್ಬವು ಬೀದಿ ಬೀದಿಗಳಲ್ಲಿ ಬಣ್ಣದ ಲೋಕವನ್ನೆ ಸೃಷ್ಟಿಸುತ್ತದೆ; ಆಬಾಲವೃದ್ಧರೂ ಸೇರಿದಂತೆ ಎಲ್ಲರಲ್ಲೂ ಸಂಭ್ರಮದ ಹೊನಲನ್ನು ಹರಿಸುತ್ತದೆ.

Ad Widget . Ad Widget . Ad Widget .

ಸದ್ದು-ಗದ್ದಲದಿಂದ ತುಂಬಿದ ಮೆರವಣಿಗೆಗಳು, ಘೋಷಗಳು, ಡೋಲು-ಡಕ್ಕೆಗಳ ಬಡಿಯುವಿಕೆ, ಬಣ್ಣಗಳಲ್ಲಿ ಮುಚ್ಚಿಹೋದ ಮುಖಗಳು, ಹಾದುಹೋಗುವವರ ಮೇಲೆಲ್ಲ ಚಿಮ್ಮಿಸುವ ಬಣ್ಣಬಣ್ಣದ ನೀರಿನ ಕಾರಂಜಿ – ಇಂತಹ ದೃಶ್ಯ ಹೋಳಿಹಬ್ಬದ ಸಂದರ್ಭಗಳಲ್ಲಿ ಭಾರತದ ಉದ್ದಗಲಕ್ಕೂ ಸರ್ವೇಸಾಮಾನ್ಯ. ಬೇರೆ ದೇಶಗಳಲ್ಲೂ ಹಬ್ಬದ ಸಂದರ್ಭದಲ್ಲಿ ಇಂತಹ ಅಮೋದಪ್ರಮೋದದ ದೃಶ್ಯಗಳು ಕಂಡುಬರುತ್ತವೆ. ಅಲ್ಲೆಲ್ಲ ಉನ್ನತ ವರ್ಗದವರು ಹೂವಿನ ಅಲಂಕಾರಗಳನ್ನೂ, ಹಾಡು ಸಂಗೀತಗಳನ್ನೂ, ಸುವಾಸನಾಯುಕ್ತ ನೀರಿನ ಕಾರಂಜಿಯನ್ನು ಚಿಮ್ಮಿಸುವ ಮೂಲಕವೂ ತಮ್ಮ ಅಮೋದ ಪ್ರಮೋದದ ಖುಷಿಯನ್ನು ಹೆಚ್ಚಿಸಿಕೊಳ್ಳುವುದುಂಟು.

ಹೋಳಿಹಬ್ಬದ ಆಚರಣೆಯಲ್ಲಿ ಪೂಜೆ, ಉಪವಾಸ ಇತ್ಯಾದಿ ಯಾವುದೇ ಧಾರ್ಮಿಕ ಆಚರಣೆಗಳು ಇಲ್ಲವೆಂದೇ ಹೇಳಬಹುದು. ಸಾಮಾನ್ಯವಾಗಿ ಹೋಳಿಹಬ್ಬಕ್ಕೆ 40 ದಿನಗಳಷ್ಟು ಮೊದಲೆ, ವಸಂತ ಪಂಚಮಿ(ಮಾಘ ಶುಕ್ಲ ಪಂಚಮಿ)ಯಂದೆ, ಸಾರ್ವಜನಿಕವಾಗಿ ಪ್ರಮುಖಸ್ಥಳದಲ್ಲಿ ಮರದ ದಿಮ್ಮಿಯೊಂದನ್ನು ಇರಿಸಿ, ಅದರ ಮೇಲೆ ಬೇಗ ಉರಿದು ಬೂದಿಯಾಗುವಂಥ ಹೋಳಿಕಾ ಮೂರ್ತಿಯೊಂದನ್ನು ಇಟ್ಟು, ಅದರ ತೊಡೆಯ ಮೇಲೆ ಬೆಂಕಿಯ ಬಾಧೆಗೆ ತುತ್ತಾಗದಂಥ ಬಾಲಪ್ರಹ್ಲಾದನ ಮೂರ್ತಿಯನ್ನು ಇರಿಸುತ್ತಾರೆ. ಅನಂತರ ಅಲ್ಲಿಗೆ ಊರ ಜನರು ತಮ್ಮ ಬಳಿಯಿರುವ ಮರದ ತುಂಡುಗಳೇ ಮೊದಲಾದ ಅನುಪಯುಕ್ತ ದಹನಶೀಲ ವಸ್ತುಗಳನ್ನು ತಂದು ಸುರಿಯುತ್ತಾರೆ. ಇದು ಫಾಲ್ಗುಣ ಪೂರ್ಣಿಮೆಯ ವರೆಗೂ ನಡೆಯುತ್ತದೆ. ಆ ವೇಳೆಗೆ ಅಲ್ಲಿ ದಹನಶೀಲ ವಸ್ತುಗಳ ಒಂದು ರಾಶಿಯೇ ಏರ್ಪಟ್ಟಿರುತ್ತದೆ.

ಮರಗಿಡಗಳ ಕೊರಳುಗಳಿಂದ ಹೊರಹೊಮ್ಮುವ ಕೋಗಿಲೆ-ಕಾಜಾಣಗಳ ಇಂಪಾದ ಸಂಗೀತ. ಋುತುಗಳ ರಾಜ ವಸಂತನ ಸ್ವಾಗತಕ್ಕೆ ನಿಸರ್ಗದೇವತೆ ಇಷ್ಟಾದರೂ ಸಿದ್ಧತೆ ಮಾಡಿಕೊಳ್ಳದಿದ್ದರೆ ಹೇಗೆ? ಸಗ್ಗದ ಬಾಗಿಲು ಅಲ್ಲಿ ಹುದಣ್ಣ! ನುಗ್ಗಿದರಲ್ಲೆ ತೆರೆಯುವುದಣ್ಣ! ಹಕ್ಕಿಯ ಟುವ್ವಿಯೊಳವಿತಿದೆಯಣ್ಣ, ಹೂವಿನ ಬಣ್ಣದೊಳಡಗಿದೆಯಣ್ಣ ಎಂದು ಕವಿ ಕುವೆಂಪು ಬಣ್ಣಿಸಿರುವುದು ಎಷ್ಟೊಂದು ಸಹಜವಾಗಿದೆ.

ಗೋಡೆಯ ಮೇಲಿನ ಕ್ಯಾನ್ವಾಸು ತುಂಬುವುದಕ್ಕೆ ಒಂದೆರಡು ಹಿಡಿ ಬಣ್ಣ ಸಾಕು. ಪ್ರಕೃತಿ ದೇವಿಯ ಕನಸುಗಳ ಕ್ಯಾನ್ವಾಸು ವರ್ಣಮಯವಾಗಬೇಕೆಂದರೆ ಟನ್ನುಗಟ್ಟಲೆ ಬಣ್ಣ ಬೇಕು. ಒಂದೆರಡು ವಿಧವೆಲ್ಲ ಸಾಲದು. ಕೆಂಪು, ಹಳದಿ, ಹಸುರು, ಕಿತ್ತಳೆ, ನೀಲಿ, ನೇರಳೆ… ನೂರೆಂಟು ಬಗೆ ಇರಬೇಕು. ಅವನ್ನೆಲ್ಲ ನಿರೀಕ್ಷೆಗಳ ಸಮುದ್ರದಲ್ಲಿ ಕಲಸಿ ಭರವಸೆಯೆಂಬ ಪಿಚಕಾರಿಗಳಲ್ಲಿ ಚೆಲ್ಲಾಡಬೇಕು. ಹೌದು, ಪ್ರಕೃತಿ ಮರಳಿ ಮರಳಿ ಅರಳುವುದಕ್ಕೆ ಬಣ್ಣಬಣ್ಣದ ಕನಸುಗಳ ಹೋಳಿಯೇ ನಡೆಯಬೇಕು.

ದುಷ್ಟಶಕ್ತಿಗಳೆದುರು ಒಳ್ಳೆಯತನದ ಗೆಲುವನ್ನು; ಮುರಿದ ಸಂಬಂಧಗಳ ಮರುಬೆಸುಗೆಯನ್ನು; ತಪ್ಪುಗಳನ್ನೆಲ್ಲ ಮರೆತು ಒಪ್ಪುಗಳನ್ನಷ್ಟೇ ಅಪ್ಪಿಕೊಳ್ಳುವ ಉದಾರತೆಯನ್ನು; ಹೊಸ ಭರವಸೆಯೊಂದಿಗೆ ಬದುಕಿನ ನೂತನ ಅಧ್ಯಾಯದ ಆರಂಭವನ್ನು. ಮಾರ್ಗ ಹೇಗೆಯೇ ಇರಲಿ, ಕೊನೆಯಲ್ಲಿ ತಲುಪುವ ಗಮ್ಯ ರಮ್ಯವಾಗಿರುತ್ತದೆ ಎಂಬ ವಿಶ್ವಾಸವೇ ತಾನೇ ನಾವೆಲ್ಲ ನಾಳೆಯ ಬೆಳಗನ್ನು ಕಾಯುವಂತೆ ಮಾಡುವುದು?

ಪ್ರಕೃತಿಯಲ್ಲಿ ಸಂಭ್ರಮ ತುಂಬಿದಾಗ ಸಹಜವಾಗಿಯೇ ಅದು ಜನಜೀವನದಲ್ಲೂ ಪ್ರತಿಫಲಿಸಬೇಕು. ಆಗಲೇ ನಿಸರ್ಗದ ನಲಿವು ಜನಪದರ ಒಲವಾಗಿ ಮಾರ್ಪಡುತ್ತದೆ. ಕಹಿನೆನಪುಗಳ ನಿಟ್ಟುಸಿರು ವಸಂತನನ್ನು ಹಿಂಬಾಲಿಸುವ ಮಂದಮಾರುತನ ಅಲೆಯಲೆಗಳಲ್ಲಿ ಸೇರಿ ಮರೆಯಾಗಿಬಿಡುತ್ತದೆ. ಕೊನೆಯಲ್ಲಿ ಉಳಿಯುವುದು ಮಧುರ ಭಾವಗಳು ಮಾತ್ರ. ಕೆಟ್ಟದ್ದನ್ನು ಸುಟ್ಟು ಇಷ್ಟವಾದದ್ದನ್ನು ಮೂಟೆಕಟ್ಟುವ ಒಟ್ಟಂದದ ಹಬ್ಬವಲ್ಲವೇ ಹೋಳಿ?

Leave a Comment

Your email address will not be published. Required fields are marked *