ಸಮಗ್ರ ನ್ಯೂಸ್: ಆಯೋಧ್ಯೆಯಲ್ಲಿ ರಾಮಲಲಾನ ಪ್ರಾಣಪ್ರತಿಷ್ಟೆ ಬಳಿಕ ಇದೇ ಮೊದಲ ಬಾರಿಗೆ ಶ್ರೀ ರಾಮ ಮಂದಿರದಲ್ಲಿ ಹೋಳಿ ಹಬ್ಬದ ಸಂಭ್ರಮ. ಹೀಗಾಗಿ ಅದ್ಧೂರಿ ಹಬ್ಬದ ಆಚರಣೆಗೆ ರಾಮಜನ್ಮಭೂಮಿ ಟ್ರಸ್ಟ್ ನಿರ್ಧರಿಸಿದ್ದು, ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದೆ.
ಭವ್ಯ ಮಂದಿರದಲ್ಲಿ ಶ್ರೀರಾಮನಿಗೆ ಮೊದಲ ಹೋಳಿ ಹಬ್ಬ ಆಚರಣೆಯಾಗಿದೆ. ಹೀಗಾಗಿ ವಿಶೇಷವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಹೋಳಿ ಹಬ್ಬ ಆಚರಣೆ ವೇಳೆ ರಾಮಲಲಾನಿಗೆ ಬಣ್ಣ ಹಚ್ಚಲಾಗುತ್ತದೆ. ಇದೇ ವೇಳೆ ಕಚೋರಿ, ಗುಜಿಯಾ, ಪುರಿ, ಕಡುಬು ಸೇರಿದಂತೆ ಇತರ ಭಕ್ಷ್ಯಗಳನ್ನು ನೈವೇದ್ಯಗಳೊಂದಿಗೆ ಅರ್ಪಿಸಲಾಗುತ್ತದೆ. ವಿಶೇಷ ಪೂಜೆ ಬಳಿಕ ಈ ಪ್ರಸಾದವನ್ನು ರಾಮ ಭಕ್ತರಿಗೆ ವಿತರಿಸಲಾಗುತ್ತದೆ ಎಂದು ಈ ಕುರಿತು ಮಾಹಿತಿ ನೀಡಿದ ರಾಮ ಮಂದಿರ ಪ್ರಧಾನ ಅರ್ಚಕ ಅಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.
ಶ್ರೀರಾಮನ ಪ್ರಾಣಪ್ರತಿಷ್ಠೆ ಬಳಿಕ ಆಗಮಿಸಿರುವ ಮೊದಲ ಹೋಳಿ ಹಬ್ಬವಾಗಿದೆ. ದಶರಥನ ಕಾಲದಲ್ಲಿ ಆಯೋಧ್ಯೆಯಲ್ಲಿದ್ದ ಗತವೈಭವ ಮರುಕಳಿಸಿದೆ. ಈ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ಭಕ್ತರು ಸಹಕರಿಸಬೇಕು ಎಂದು ತೀರ್ಥ ಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ.
ಈಗಾಗಲೇ ಆಯೋಧ್ಯೆ ರಾಮ ಮಂದಿರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಪ್ರಾರಂಭವಾಗಿರುವ ಕಾರಣ ಕುಟುಂಬ ಸಮೇತ ರಾಮ ಭಕ್ತರು ಮಂದಿರಕ್ಕೆ ಆಗಮಿಸಿ ದರುಶನ ಪಡೆಯುತ್ತಿದ್ದಾರೆ. ಉರಿ ಬಿಸಿಲಿನ ಕಾರಣ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.