ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ವಾರಣಾಸಿಯಿಂದ ಪ್ರದಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಅಜಯ್ ರೈ ಹೆಸರನ್ನು ಘೋಷಿಸಿದೆ. 2014, 2019ರಲ್ಲೂ ಅಜಯ್ ರೈ ವಾರಣಾಸಿಯಿಂದ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. ಇದೀಗ 3ನೇ ಬಾರಿಗೆ ಅಜಯ್ ರೈ ಮೋದಿ ವಿರುದ್ಧ ಕಣಕ್ಕಿಳಿದಿದ್ದಾರೆ.
ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿರುವ ಅಜಯ್ ರೈ ಮಾಜಿ ಬಿಜೆಪಿ ನಾಯಕ. 1996 ರಿಂದ 2007ರ ವರೆಗೆ ಉತ್ತರ ಪ್ರದೇಶದ ಕೋಲಸಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ವಿಶೇಷ ಅಂದರೆ 3 ಬಾರಿ ಬಿಜೆಪಿ ನಾಯಕನಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ಆದರೆ 2009ರ ಲೋಕಸಭಾ ಚುನಾವಣೆ ವೇಳೆಗೆ ಅಜಯ್ ರೈಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಈ ವೇಳೆ ಸಮಾಜವಾದಿ ಪಾರ್ಟಿ ಸೇರಿಕೊಂಡಿದ್ದರು.
2009ರಲ್ಲಿ ವಾರಣಾಸಿಯಿಂದ ಬಿಜೆಪಿ ಮುರಳಿ ಮನೋಹರ್ ಜೋಶಿಗೆ ಟಿಕೆಟ್ ನೀಡಿತ್ತು. ಜೋಶಿ ವಿರುದ್ಧ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿದ ಅಜಯ್ ರೈ ಸೋಲು ಕಂಡಿದ್ದರು. 2012ರಲ್ಲಿ ಕಾಂಗ್ರೆಸ್ ಪಕ್ಷ ಸೇರಿಕೊಂಡ ಅಜಯ್ ರೈ ಉತ್ತರ ಪ್ರದೇಶದಲ್ಲಿ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಕಳೆದೆರಡು ಲೋಕಸಭಾ ಚುನಾವಣೆಯಲ್ಲಿ ಅಜಯ್ ರೈ ವಾರಣಾಸಿಯಿಂದ ಮೋದಿ ವಿರುದ್ಧ ಸ್ಪರ್ಧಿಸಿದ್ದಾರೆ. 2019ರಲ್ಲಿ ವಾರಣಾಸಿಯ 1.52 ಲಕ್ಷ ಮತದಾರರ ಪೈಕಿ ಅಜಯ್ ರೈ ಶೇಕಡಾ 14.38 ವೋಟ್ ಶೇರ್ ಪಡೆದುಕೊಂಡಿದ್ದರು. ಪ್ರಧಾನಿ ಮೋದಿ ಶೇಕಡಾ 63.62 ವೋಟ್ ಶೇರ್ ಪಡೆದುಕೊಂಡಿದ್ದರು. 2013ರಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷರಾಗಿ ಅಜಯ್ ರೈ ನೇಮಕ ಮಾಡಲಾಗಿದೆ.