ಸಮಗ್ರ ನ್ಯೂಸ್: ತುಮಕೂರಿನ ಕುಚ್ಚಂಗಿ ಕೆರೆಯಲ್ಲಿ ಕಾರಿನೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಎಸ್‌ಡಿಪಿಐ ಕಾರ್ಯಕರ್ತ ಶಾಹುಲ್ ಉಜಿರೆ ಸೇರಿದಂತೆ ಮೂವರು ಯುವಕರನ್ನು ಅಮಾನುಷ ರೀತಿಯಲ್ಲಿ ಕೊಲೆ ನಡೆಸಿದ ಘಟನೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ರವರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಪೋಲಿಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು ಈ ಘಟನೆ ದ.ಕ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ. ಕೊಲೆಯಾದ ಯುವಕರು ಯಾಕಾಗಿ ತುಮಕೂರು ಹೋಗಿದ್ದಾರೆ, ಇವರನ್ನು ಕರೆಸಿದವರು ಯಾರು? ಸೇರಿದಂತೆ ಪೋಲಿಸ್ ಇಲಾಖೆ ಸಮಗ್ರವಾದ ತನಿಖೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಘಟನೆಯು ರಾತ್ರಿ 12 ಗಂಟೆಯ ನಂತರ ನಡೆದಿರುವ ಸಾಧ್ಯತೆ ದಟ್ಟವಾಗಿದೆ. ಕೊಲೆಗೀಡಾದ ಯುವಕರು ರಾತ್ರಿ 11.30 ರ ತನಕವೂ Online ನಲ್ಲಿದ್ದು ಗೆಳೆಯರ ಗ್ರೂಪ್ ಗಳಲ್ಲಿ ಎಂದಿನಂತೆ ಪರಸ್ಪರ ಸಂಭಾಷಣೆ ನಡೆಸಿರುವುದು ಅಥವಾ ಸ್ಟೇಟಸ್ ವೀಕ್ಷಣೆ ಮಾಡಿರುವುದು ಇದೆ. ಹಾಗಾಗಿ ಈ ಯುವಕರಿಗೆ ದುಷ್ಕರ್ಮಿಗಳ ಕೆಟ್ಟ ಉದ್ದೇಶದ ಬಗ್ಗೆ ಸಣ್ಣ ಸುಳಿವು ಇರಲಿಲ್ಲ ಎಂದು ಮೇಲ್ನೋಟಕ್ಕೆ ಭಾಸವಾಗುತ್ತದೆ. ದುಷ್ಕರ್ಮಿಗಳು ಪೂರ್ವಯೋಜಿತವಾಗಿ ಪ್ಲಾನ್ ಮಾಡಿ ಯುವಕರನ್ನು ಟ್ರಾಪ್ಗೆ ಗುರಿಪಡಿಸಿ ಹತ್ಯೆ ನಡೆಸಿರುವುದು ನಿಚ್ಚಳವಾಗಿದೆ.ಅದಲ್ಲದೇ ಈ ಕೊಲೆಯ ಬಗ್ಗೆ ಹಲವಾರು ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪೋಲಿಸ್ ಇಲಾಖೆ ಈ ಒಂದು ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು ಹಾಗೂ ಕೊಲೆಯಾದ ಕುಟುಂಬಕ್ಕೆ ಸರ್ಕಾರವು ಪರಿಹಾರ ಒದಗಿಸಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.