ಸಮಗ್ರ ನ್ಯೂಸ್: ಮಾ.30 ರಿಂದ ಏ.28 ರ ವರೆಗೆ ಕೊಡವ ಕುಟುಂಬಗಳ ನಡುವಿನ ಪ್ರತಿಷ್ಠಿತ ಕುಂಡ್ಯೋಳಂಡ ಹಾಕಿ ಹಬ್ಬ ನಾಪೆÇೀಕ್ಲು ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ದಾಖಲೆಯ 360 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಕೂರ್ಗ್ 11 ಮತ್ತು ಇಂಡಿಯನ್ ನೇವಿ ನಡುವೆ ಉದ್ಘಾಟನಾ ಪಂದ್ಯ ಆಯೋಜಿಸಲಾಗಿದೆ.
ಕೊಡವ ಹಾಕಿ ಅಕಾಡೆಮಿ 26 ವರ್ಷಗಳ ಹಿಂದೆ ಕೊಡವ ಹಾಕಿ ಹಬ್ಬದ ಜನಕ ದಿ. ಪಾಂಡಂಡ ಕುಟ್ಟಣಿ ಅವರ ನೇತೃತ್ವದಲ್ಲಿ 1997 ರಲ್ಲಿ ಸ್ಥಾಪಿತಗೊಂಡಿತು. ಅಂದಿನಿಂದ ಇಂದಿನವರೆಗೆ ಕೊಡವ ಕುಟುಂಬಗಳ ನಡುವಿನ ವಿಶ್ವದಾಖಲೆಯ ಹಾಕಿ ಹಬ್ಬ ಆಯೋಜಿಸುತ್ತಾ ಬರುತ್ತಿದೆ ಎಂದರು. ಈ ವರ್ಷ 24ನೇ ಹಾಕಿ ಹಬ್ಬವನ್ನು ಕುಂಡ್ಯೋಳಂಡ ಕುಟುಂಬದ ಸಾರಥ್ಯದಲ್ಲಿ ನಡೆಸಲಾಗುತ್ತಿದೆ. ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್, ಹಾಕಿ ಕರ್ನಾಟಕ ಹಾಗೂ ಸ್ಥಳೀಯ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡುತ್ತಿದ್ದು, ಕುಂಡ್ಯೋಳಂಡ ಹಾಕಿ ಕಾರ್ನಿವಲ್ 2024 ರ ಅಂತಿಮ ಪಂದ್ಯಾಟವನ್ನು ಸುಮಾರು 50 ಸಾವಿರ ಕ್ರೀಡಾಭಿಮಾನಿಗಳು ವೀಕ್ಷಿಸುವ ನಿರೀಕ್ಷೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ, ಕ್ರೀಡಾಕೂಟದ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಅಧ್ಯಕ್ಷ ರಮೇಶ್ ಮುದ್ದಯ್ಯ ಹಾಗೂ ಪ್ರಮುಖರು ತಿಳಿಸಿದರು.
ಭಾರತೀಯ ಹಾಕಿಯ ತೊಟ್ಟಿಲು ಎಂದೇ ಪರಿಗಣಿಸಲ್ಪಟ್ಟಿರುವ ಕೊಡಗು ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ಶ್ರೀಮಂತ ಪರಂಪರೆ ಹೊಂದಿದೆ. 50ಕ್ಕೂ ಹೆಚ್ಚು ಕೊಡವ ಅಂತಾರಾಷ್ಟ್ರೀಯ ಹಾಕಿ ಆಟಗಾರರು ಹಾಕಿ ಕ್ರೀಡೆಯ ಪರಂಪರೆಗೆ ಕೊಡುಗೆ ನೀಡಿದ್ದಾರೆ. ಪಾಂಡಂಡ ಕುಟ್ಟಣ್ಣಿ ಹಾಗೂ ಅವರ ಸಹೋದರ ಕಾಶಿಯವರಿಂದ ಕೊಡವ ಹಾಕಿ ಉತ್ಸವ ಆರಂಭವಾಯಿತು. 1997 ರಲ್ಲಿ ಕರಡದಲ್ಲಿ ಪಾಂಡಂಡ ಕುಟುಂಬ ಮೊದಲ ಬಾರಿಗೆ ಆಯೋಜಿಸಿದ್ದ ಹಾಕಿಹಬ್ಬದಲ್ಲಿ 60 ತಂಡಗಳು ಪಾಲ್ಗೊಂಡಿದ್ದವು ಎಂದು ವಿವರಿಸಿದರು. ಈ ಬಾರಿಯ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ 360 ತಂಡಗಳ ನೋಂದಣಿಯೊಂದಿಗೆ ಹೊಸ ದಾಖಲೆ ಸೃಷ್ಟಿಸುವ ಮೂಲಕ ಪ್ರತಿಷ್ಠಿತ ಕಪ್ ಗಾಗಿ ಸೆಣಸಾಡುತ್ತಿರುವುದು ವಿಶೇಷ. ಕುಂಡ್ಯೋಳಂಡ ಕುಟುಂಬಸ್ಥರು ಹಾಗೂ ಕೊಡವ ಹಾಕಿ ಅಕಾಡೆಮಿ ಹಾಕಿ ಹಬ್ಬ ಆಯೋಜಿಸುವ ಮೂಲಕ ಸಮುದಾಯದ ಬಾಂಧವ್ಯ ಬೆಳೆಸುವ ಮತ್ತು ಕೊಡವ ಪರಂಪರೆ ಸಂರಕ್ಷಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.ಹಾಕಿ ಜೊತೆ
ಹಾಕಿ ಹಬ್ಬದೊಂದಿಗೆ ಮ್ಯಾರಥಾನ್ ಓಟ, ವಧುವರರ ಸಮಾವೇಶ, ಆಹಾರ ಉತ್ಸವ, ಆರೋಗ್ಯ ಶಿಬಿರ, ವೃತ್ತಿ ಮಾರ್ಗದರ್ಶನ, ಹಾಕಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಆಟಗಾರರ ಪುನರ್ ಮಿಲನ ಮತ್ತು ಬಾಳೋಪಾಟ್ ತರಬೇತಿ ಮತ್ತಿತರ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಅನೇಕ ಆಕರ್ಷಕ ಸ್ಟಾಲ್ ಗಳು ಗಮನ ಸೆಳೆಯಲಿವೆ. ಪ್ರತಿಷ್ಠಿತ ವಿವಿಧ ವಾಹನ ಸಂಸ್ಥೆಗಳು, ಕಾಫಿ ಸಂಸ್ಥೆಗಳು ಸೇರಿದಂತೆ ವೈವಿಧ್ಯಮಯ ಸ್ಟಾಲ್ ಗಳು ಇರಲಿವೆ.