ಸಮಗ್ರ ನ್ಯೂಸ್: ಪತಂಜಲಿ (PATANJALI) ಸಂಸ್ಥೆ ವಿರುದ್ಧ ತಪ್ಪು ಮಾಹಿತಿಯೊಂದಿಗೆ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಸ್ಥೆಯ ಮುಖ್ಯಸ್ಥ ಬಾಬಾ ರಾಮ್ ದೇವ್ (BABA RAM DEV) ಅವರು ಬೇಷರತ್ ಕ್ಷಮೆಯಾಚಿಸಿದ್ದಾರೆ.
ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ಪತಂಜಲಿ ಆಯುರ್ವೇದ ಔಷಧಿಗಳ ಜಾಹೀರಾತುಗಳಿಗೆ ತಾತ್ಕಾಲಿಕ ನಿಷೇಧವನ್ನು ವಿಧಿಸಿತ್ತು. ಅಲ್ಲದೇ ತಪ್ಪುದಾರಿಗೆಳೆಯುವ ಜಾಹೀರಾತು ನೀಡಿದ್ದಕ್ಕಾಗಿ ಅದರ ಸಂಸ್ಥಾಪಕರಾದ ರಾಮ್‍ದೇವ್ ಮತ್ತು ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿ, 2 ವಾರಗಳ ಅವಧಿಯಲ್ಲಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಕೋರ್ಟ್ ಎಚ್ಚರಿಕೆ ನೀಡಿದ 2 ದಿನಗಳಲ್ಲಿ ಸಂಸ್ಥೆ ಕ್ಷಮೆ ಕೋರಿದೆ.
ಆಚಾರ್ಯ ಬಾಲಕೃಷ್ಣ ಅವರು ಸುಪ್ರೀಂ ಕೋರ್ಟ್‍ಗೆ ಪ್ರತಿಕ್ರಿಯೆ ನೀಡಿದ್ದು, ದೇಶದ ಕಾನೂನಿನ ಬಗ್ಗೆ ಪತಂಜಲಿ ಸಂಸ್ಥೆಗೆ ಅಪಾರವಾದ ಗೌರವವಿದೆ. ಕೋರ್ಟ್‍ಗೆ ಕಂಪನಿಯು ಬೇಷರತ್ ಕ್ಷಮೆಯಾಚಿಸುತ್ತದೆ. ಪತಂಜಲಿ ಸಂಸ್ಥೆಯು ಭವಿಷ್ಯದಲ್ಲಿ ಇಂತಹ ಜಾಹೀರಾತುಗಳನ್ನು ನೀಡುವುದಿಲ್ಲ. ಮುಂದೆ ನೀಡುವ ಜಾಹೀರಾತುಗಳು ಕಾನೂನಿನ ಅನ್ವಯವಾಗಿ ಇರುತ್ತವೆ. ಪತಂಜಲಿ ಸಂಸ್ಥೆಯ ಉತ್ಪನ್ನಗಳನ್ನು ಸೇವಿಸುವ ಮೂಲಕ ದೇಶದ ಜನ ಆರೋಗ್ಯದಿಂದ ಇರಲಿ ಎಂಬುದಷ್ಟೇ ನಮ್ಮ ಜಾಹೀರಾತಿನ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.