ಸಮಗ್ರ ನ್ಯೂಸ್ : ಲಾರಿಗಳ ನಂಬರ್ ಪ್ಲೇಟ್ ಗೆ ಗ್ರೀಸ್ ಹಚ್ಚಿ ಹಾಗೂ ಸ್ಟಿಕ್ಕರ್ ಬಳಸಿ ಮರಳು ಸಾಗಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದ್ದು, ಮಂಗಳೂರಿನ ಕಣ್ಣೂರಿನಲ್ಲಿ ಮಧ್ಯರಾತ್ರಿ ರಸ್ತೆ ತಡೆದು ಸ್ಥಳೀಯರು ಪ್ರತಿಭಟನೆ ಮಾಡಿದ್ದಾರೆ.
ಕೊಣಾಜೆ, ಮಂಗಳೂರು ಗ್ರಾಮಾಂತರ, ಉಳ್ಳಾಲ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಅಲ್ಲದೆ ಕಣ್ಣೂರು ಸಮೀಪ ನಂಬರ್ ಪ್ಲೇಟ್ ಮಾಸಿದ ಮರಳು ಸಾಗಾಟದ ಲಾರಿ ಡಿವೈಡರಿಗೆ ಢಿಕ್ಕಿಯಾಗಿದ್ದು, ಪರಿಣಾಮ ಸಾರ್ವಜನಿಕರು ಲಾರಿಗಳನ್ನು ತಡೆಹಿಡಿದ್ದಾರೆ ಈ ವೇಳೆ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿತ್ತು.
ಉಳ್ಳಾಲ, ಕೋಟೆಪುರ, ಕಣ್ಣೂರು, ಫರಂಗಿಪೇಟೆ, ಹರೇಕಳ , ಪಾವೂರು ಭಾಗಗಳಿಂದ ಮರಳು ಸಾಗಾಟ ವಾಗುತ್ತಿದೆ. ಲಾರಿಗಳನ್ನು ತಡೆಹಿಡಿದ ಸಾರ್ವಜನಿಕರು ಪೊಲೀಸರು ಬರುವವರೆಗೆ ರಸ್ತೆ ತಡೆದಿದ್ದಾರೆ. ಸ್ಥಳದಲ್ಲಿ ಮರಳು ಮಾಫಿಯಾ ಹಾಗೂ ಸಾರ್ವಜನಿಕರು ಜಮಾಯಿಸಿದ್ದರು. ಈ ವೇಳೆ ತೀವ್ರ ವಾಗ್ವಾದ ನಡೆದಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಂಬರ್ ಪ್ಲೇಟ್ ಮಾಸಿದ ರೀತಿಯಲ್ಲಿದ್ದ ಒಂದು ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡರು. ಮಂಗಳೂರು ದಕ್ಷಿಣ ಠಾಣಾ ವ್ಯಾಪ್ತಿಗೆ ಬರುವ ಮೂರು ಠಾಣೆಗಳ ಎದುರೇ ಮರಳು ದಂಧೆಯು ಎಗ್ಗಿಲ್ಲದೆ ನಡೆಯುತ್ತಿದೆ. ಮರಳು ಸಾಗಾಟದ ಹಿಂದೆ ತಲಪಾಡಿ ಮೂಲದ ಕಾಂಗ್ರೆಸ್ ಮುಖಂಡರು ಸಕ್ರಿಯವಾಗಿದ್ದಾರೆ. ಅಲ್ಲದೇ ಸಿಪಿ ಧನ್ಯಾ ನಾಯಕ್ ಲಾರಿಗಳ ಆರ್ಬಟವನ್ನು ಗಮನಿಸಿಯೂ ಕಣ್ಣಿದ್ದೂ ಕುರುಡರಾಗಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.