ಮಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ ಉತ್ಪಾದಿಸುವ ಸುಮಾರು 50ರಷ್ಟು ವಿಧದ `ನಂದಿನಿ’ ಐಸ್‍ಕ್ರೀಂ ಉತ್ಪನ್ನಗಳನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಐಸ್‍ಕ್ರೀಂ ಸಂಗ್ರಹದ ಕೋಲ್ಡ್ ಸ್ಟೋರೇಜ್ ಘಟಕ ಉದ್ಘಾಟನೆ ಹಾಗೂ ಐಸ್‍ಕ್ರೀಂ ಬಿಡುಗಡೆಯನ್ನು ನೆರವೇರಿಸಿದರು.
‘ಹಾಲು ಮಹಾಮಂಡಳವು ಒಕ್ಕೂಟವನ್ನು ಐಸ್‍ಕ್ರೀಂ ಮಾರಾಟಕ್ಕೆ ಸೂಪರ್ ಸ್ಟಾಕಿಸ್ಟ್ ಆಗಿ ನೇಮಿಸಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಾರಂಭಿಕ ಹಂತದಲ್ಲಿ ನಂದಿನಿ 157 ಶ್ರೇಣಿಯ ಐಸ್‍ಕ್ರೀಂಗಳಲ್ಲಿ 50 ಶ್ರೇಣಿಗಳನ್ನು ಒಕ್ಕೂಟದ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ. ಮಹಾಮಂಡಳದಲ್ಲಿ ಉತ್ತಮ ದರ್ಜೆಯ ಕೆನೆಯಿಂದ ಸಂಪೂರ್ಣ ನೈಸರ್ಗಿಕ ಮತ್ತು ದೇಶೀಯವಾದ ಐಸ್‍ಕ್ರೀಂ ಜನರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ. ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದಲೇ ಐಸ್ ಕ್ರೀಂ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕೆನ್ನುವುದು ಹಲವು ಸಮಯದ ಕನಸಾಗಿತ್ತು. ಐಸ್ ಕ್ರೀಂ ಕ್ಷೇತ್ರದಲ್ಲಿ ಮಂಗಳೂರಿನಲ್ಲಿ ಭಾರೀ ಪೈಪೆÇೀಟಿಯಿದೆ. ನಂದಿನಿ ಉತ್ತಮ ಗುಣಮಟ್ಟದ ಐಸ್‍ಕ್ರೀಂ ಆಗಿದ್ದು, ಈಗಾಗಲೇ ಉತ್ತಮ ಬೇಡಿಕೆ ಪಡೆದುಕೊಂಡಿದೆ,’ ಎಂದು ಅವರು ಹೇಳಿದರು
ಹಾಲು ಮಹಾಮಂಡಳದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ. ವಿವೇಕ್, ಮಾರುಕಟ್ಟೆ ವ್ಯವಸ್ಥಾಪಕ ಡಾ| ರವಿರಾಜ ಉಡುಪ, ದ.ಕ. ಹಾಲು ಒಕ್ಕೂಟದ ನಿರ್ದೇಶಕರಾದ ಸವಿತಾ ಶೆಟ್ಟಿ, ಸುಭದ್ರಾ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.