ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಕಾಂಗ್ರೆಸ್ ಸೇರ್ಪಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಣ್ಣೀರು ಎರಚಿದ್ದಾರೆ ಎನ್ನಲಾಗಿದೆ. ಬಿಜೆಪಿ ಅಸಮಾಧಾನಿತ ನಾಯಕರು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಬರುವುದು ಬೇಡ ಎಂದು ಸಿದ್ದರಾಮಯ್ಯ ಖಡಕ್ ಆಗಿ ಹೇಳಿದ್ದಾರೆ. ಹೀಗಾಗಿ ಸದಾನಂದ ಗೌಡ ಸಹಿತ ಬಿಜೆಪಿಯ ಹಲವು ಅತೃಪ್ತ ನಾಯಕರ ಕಾಂಗ್ರೆಸ್ ಸೇರುವ ಯೋಜನೆ ಠುಸ್ ಆಗಿದೆ ಎಂದು ಮೂಲವೊಂದು ತಿಳಿಸಿದೆ.
ಮೈಸೂರು ಕ್ಷೇತ್ರದಿಂದ ಸದಾನಂದ ಗೌಡರನ್ನು ಕಾಂಗ್ರೆಸ್ ಕಣಕ್ಕಿಳಿಸುವ ವದಂತಿ ದಟ್ಟವಾಗಿ ಹರಡಿತ್ತು. ಈ ಪ್ರಸ್ತಾವಕ್ಕೆ ಒಂದೇ ಮಾತಿನಲ್ಲಿ ಸಿದ್ದರಾಮಯ್ಯ ಆಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಬೆಂಗಳೂರು ಭಾಗದ ಪ್ರಭಾವಿ ಬಿಜೆಪಿ ಶಾಸಕರೊಬ್ಬರು ಕಾಂಗ್ರೆಸ್ ಜೊತೆ ಈಗಲೂ ಉತ್ತಮ ಸಂಬಂಧ ಹೊಂದಿದ್ದು, ಅವರು ಸದಾನಂದ ಗೌಡರನ್ನು ಕಾಂಗ್ರೆಸ್ ಸೇರಿಸುವ ಪ್ರಯತ್ನ ನಡೆಸಿದ್ದರು. ಮೈಸೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸದಾನಂದ ಗೌಡರನ್ನು ಕಣಕ್ಕೆ ಇಳಿಸೋಣ. ನಾನು ಮಾತನಾಡಿದ್ದು ಅವರು ಸ್ಪರ್ಧಿಸಲು ಒಪ್ಪಿಗೆ ನೀಡಿದ್ದಾರೆ. ನೀವು ಅನುಮತಿ ನೀಡಿದರೆ ಪಕ್ಷಕ್ಕೆ ಕರೆದುಕೊಂಡು ಬರುತ್ತೇನೆ ಎಂದು ತಿಳಿಸಿದ್ದರು.
ಆದರೆ ಆಪರೇಷನ್‌ಗೆ ಒಪ್ಪದ ಸಿದ್ದರಾಮಯ್ಯ ಬಿಜೆಪಿಯ ನಾಯಕರು ಚುನಾವಣೆ ವೇಳೆ ಕಾಂಗ್ರೆಸ್ ಸೇರಿ ಟಿಕೆಟ್ ಪಡೆಯುವುದು ಬೇಡ. ಜಗದೀಶ್ ಶೆಟ್ಟರ್ ಕೇಸ್‌ನಿಂದ ನಾವು ಪಾಠ ಕಲಿತ್ತಿದ್ದೇವೆ. ಸೋತರೂ, ಗೆದ್ದರೂ ನಮ್ಮ ಪಕ್ಷದವರೇ ಇರಲಿ. ಇನ್ನೊಮ್ಮೆ ಆ ರೀತಿಯ ತಪ್ಪು ಮಾಡಬಾರದು. ಬರುವುದಿದ್ದರೆ ಚುನಾವಣೆ ನಂತರ ಕಾಂಗ್ರೆಸ್‌ಗೆ ಬರಲಿ. ಆಗ ಸೇರ್ಪಡೆಯಾದರೆ ಅವರಿಗೆ ಏನಾದರೂ ವ್ಯವಸ್ಥೆ ಮಾಡೋಣಾ ಎಂದು ಹೇಳಿ ಆಪರೇಷನ್ ಕಾಂಗ್ರೆಸ್‌ಗೆ ಬ್ರೇಕ್ ಹಾಕಿದ್ದಾರೆ.