ಸಮಗ್ರ ನ್ಯೂಸ್ : ಬೈಕ್ ಖರೀದಿಯ ಕನಸು ಕಂಡ ಕಾರ್ಕಳದ ಯುವಕನೊಬ್ಬ ಓಎಲ್‌ಎಕ್ಸ್ ನಲ್ಲಿ ಇದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿ ಮೋಸದ ಜಾಲಕ್ಕೆ ಬರೋಬರಿ ರೂ. 1,18,139 ಕಳೆದುಕೊಂಡು ನ್ಯಾಯ ಕೋರಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಮೆಟ್ಟಲೇರಿದ ಘಟನೆ ನಡೆದಿದೆ.
ಇರ್ಫಾನ್ (27) ಎಂಬಾತ ಮೋಸ ಹೋದ ವ್ಯಕ್ತಿ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ದಾಖಲಿಸಿದ್ದಾರೆ. ಇವರು ಬೈಕ್ ಖರೀದಿ ಮಾಡಲು ಸಾಮಾಜಿಕ ಜಾಲತಾಣವಾದ olx ನಲ್ಲಿ ಹುಡುಕಾಟ ನಡೆಸುತ್ತಿರುವ ಸಮಯ ಅದರಲ್ಲಿ ಸಿಕ್ಕಿದ ಮೊಬೈಲ್ ನಂಬ್ರಗಳಿಗೆ 2023 ಆಗಸ್ಟ್ 03 ರಂದು ಬೆಳಿಗ್ಗೆ 09:30 ಗಂಟೆಗೆ ಕರೆ ಮಾಡಿರುತ್ತಾರೆ.
ಬೈಕ್ ಬಗ್ಗೆ ಮಾಹಿತಿ ಕೇಳಿದಾಗ ಆ ವ್ಯಕ್ತಿ ತಾನು ಇಂಡಿಯನ್ ಆರ್ಮಿಯಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ತಾನು ಬೈಕ್ ಮಾರಾಟ ಮಾಡುತ್ತೇನೆ ಎಂದು ಹೇಳಿ ಬೈಕಿನ ಫೋಟೋ ಮತ್ತು ವಿವರವನ್ನು ಇರ್ಫಾನ್ ನ ವಾಟ್ಸಾಪ್ ಮೂಲಕ ರವಾಯಿಸಿರುತ್ತಾನೆ. ವಾಟ್ಸಾಪ್‌ನಲ್ಲಿ ಬಂದ ಬೈಕ್‌ನ ಫೋಟೋ ಗಮನಿಸಿದ ಇರ್ಫಾನ್ ಬೈಕ್ ಖರೀದಿಸುವ ಕುರಿತು ಮಾತುಕತೆ ನಡೆಸಿದಲ್ಲದೇ ಒಪ್ಪಿಗೆ ಸೂಚಿಸಿದ್ದಾರೆ.
ಆ ವ್ಯಕ್ತಿಯು ಆತನ ಬ್ಯಾಂಕ್ ನ ಖಾತೆ ನೀಡಿ ಸದರಿ ಖಾತೆಗೆ ಹಣ ಜಮಾವಣೆ ಮಾಡಿದರೆ ಸಾಯಂಕಾಲದ ಒಳಗಾಗಿ ಬೈಕನ್ನು ನಿಮ್ಮ ಮನೆಗೆ ಮುಟ್ಟಿಸುವುದಾಗಿ ಇರ್ಫಾನ್‌ಗೆ ಮನದಟ್ಟು ಮಾಡಿದ್ದಾನೆ. ಅದರಂತೆ ಆತನು ತಿಳಿಸಿದ ಬ್ಯಾಂಕ್ ಖಾತೆಗೆ ಇರ್ಫಾನ್ ಹಂತ ಹಂತವಾಗಿ ಒಟ್ಟು ರೂ. 1,18,139 ಹಣವನ್ನು ವರ್ಗಾಯಿಸಿದರೂ ಇರ್ಫಾನ್‌ಗೆ ಇದುವರೆಗೂ ಬೈಕನ್ನು ನೀಡದೆ ಹಣವನ್ನು ವಾಪಾಸು ಖಾತೆಗೆ ಜಮಾ ಮಾಡದೇ ಮೋಸ ಮಾಡಿರುವುದಾಗಿ ತಿಳಿದುಬಂದಿದೆ. ಇರ್ಪಾನ್ ನೀಡಿರುವ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.