ಸಮಗ್ರ ನ್ಯೂಸ್: ಕಲ್ಲೆಸೆತಕ್ಕೆ ಸುದ್ದಿಯಾಗುತ್ತಿದ್ದ ಕಾಶ್ಮೀರದ ಬೀದಿಗಳಲ್ಲಿ ಇದೇ ಮೊದಲ ಬಾರಿಗೆ ಫಾರ್ಮುಲಾ 4 ಕಾರು ರೇಸ್ ಆಯೋಜಿಸಲಾಗಿದ್ದು, ಕಣಿವೆ ರಾಜ್ಯ ಕಾಶ್ಮೀರದ ಶ್ರೀನಗರ ದಾಲ್ ಸರೋವರದ ದಡದಲ್ಲಿ ಫಾರ್ಮುಲಾ 4 ಕಾರುಗಳ ಘರ್ಜನೆ ಜಗತ್ತಿನ ಗಮನಸೆಳೆದಿದೆ. ದಾಲ್ ಸರೋವರದ ದಡದಲ್ಲಿರುವ ಲಲಿತ್ ಘಾಟ್‍ನಿಂದ ನೆಹರೂ ಪಾರ್ಕ್‍ವರೆಗಿನ 1.7 ಕಿಮೀ ಟ್ರ್ಯಾಕ್‍ನಲ್ಲಿ ಸ್ಟೀಕ್ ರೇಸಿಂಗ್ ಕಾರುಗಳು ಭರ್ಜರಿ ಸದ್ದು ಮಾಡಿದವು.
ಪ್ರಧಾನಿ ನರೇಂದ್ರ ಮೋದಿ ಖುದ್ದು ಈ ಕುರಿತು ಸಂತಸ ವ್ಯಕ್ತಪಡಿಸಿದ್ದು, ತುಂಬಾ ಸಂತೋಷವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದ ಸೌಂದರ್ಯವನ್ನು ಮತ್ತಷ್ಟು ಉತ್ತುಂಗಕ್ಕೇರಿಸಲು ಸಹಾಯ ಮಾಡುತ್ತದೆ. ಭಾರತವು ಮೋಟಾರು ಕ್ರೀಡೆಗಳು ಅಭಿವೃದ್ಧಿ ಹೊಂದಲು ಉತ್ತಮ ಅವಕಾಶಗಳನ್ನು ನೀಡುತ್ತದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖುಷಿ ಹಂಚಿಕೊಳ್ಳುತ್ತಿದ್ದು, ಆರ್ಟಿಕಲ್ 370 ರದ್ದುಗೊಂಡ ಬಳಿಕ ನಮ್ಮ ಕಾಶ್ಮೀರ ಬದಲಾಗುತ್ತಿದೆ… ಕಾಶ್ಮೀರವನ್ನೇ ಬದಲಿಸಿದ ಪ್ರಧಾನಿ ಮೋದಿ… ಮೊಟ್ಟಮೊದಲ ಫಾರ್ಮುಲಾ 4 ಕಾರ್ ಶೋ ಇಂದು ದಾಲ್ ಲೇಕ್ ಶ್ರೀನಗರದ ದಡದಲ್ಲಿ ನಡೆಯಿತು… ಎಂದೆಲ್ಲಾ ಬರೆದುಕೊಂಡಿದ್ದಾರೆ.
ವೃತ್ತಿಪರ ಚಾಲಕರು ಪ್ರದರ್ಶಿಸಿದ ಈ ಸಾಹಸ ಪ್ರದರ್ಶನವನ್ನು ನೂರಾರು ಉತ್ಸಾಹಿ ಯುವಕರು ರಸ್ತೆಯಲ್ಲಿ ಸಾಲುಗಟ್ಟಿ ನಿಂತು ವೀಕ್ಷಿಸಿದ್ದಾರೆ. ಕಾಶ್ಮೀರದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಹಾಗೂ ಕ್ರೀಡೆಯನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಯುವಕರಿಗೆ ಪ್ರೇರಣೆ ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.