ಸಮಗ್ರ ನ್ಯೂಸ್ : ಮಂಗಲಪೇಟೆ ನಿವಾಸಿ ಮೊಹಮ್ಮದ್ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಜೈಲಿನಲ್ಲಿದ್ದ ಮೂವರು ಪ್ರಮುಖ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸುರತ್ಕಲ್ ಪೊಲೀಸರು ಈ ಮೂವರನ್ನು ಎ1, ಎ2, ಎ3 ಆರೋಪಿಗಳೆಂದು ಗುರುತಿಸಿ ಮಂಗಳೂರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಪ್ರಮುಖ ಆರೋಪಿಗಳಾದ ಬಂಟ್ವಾಳ ತಾಲೂಕಿನ ಕಾವಳಮಾಡೂರು ಗ್ರಾಮದ ಸುಹೇಲ್ ಶೆಟ್ಟಿ ಅಲಿಯಾಸ್ ಸುಭಾಷ್, ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಅಭಿಫೀಕ್ ಯಾನೆ ಮತ್ತು ಕುಳಾಯಿ ನಿವಾಸಿ ಮೋಹನ್ ಸಿಂಗ್ ಯಾನೆ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳು ಮಂಗಳೂರು ನ್ಯಾಯಾಲಯಕ್ಕೆ ತಲಾ ಒಂದು ಲಕ್ಷ ರೂಪಾಯಿ ಬಾಂಡ್ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಅವರು ನೇರವಾಗಿ ಅಥವಾ ಅವರ ವಕೀಲರ ಮೂಲಕ ತಪ್ಪದೆ ಕೆಳ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಬೇಕು ಮತ್ತು ಅವರು ಸಾಕ್ಷಿಗಳನ್ನು ಹಾಳು ಮಾಡಬಾರದು ಅಥವಾ ಯಾವುದೇ ಹೆಚ್ಚಿನ ಅಪರಾಧಗಳನ್ನು ಮಾಡಬಾರದು. ನ್ಯಾಯಾಲಯದ ಅನುಮತಿಯಿಲ್ಲದೆ ಊರು ಬಿಡುವಂತಿಲ್ಲ. ಆದೇಶದಲ್ಲಿ ನಿಗದಿಪಡಿಸಿದ ಷರತ್ತುಗಳ ಪ್ರಕಾರ ಎಲ್ಲಾ ಮೂವರು ಆರೋಪಿಗಳು ಪ್ರತಿ ಭಾನುವಾರ ಸುರತ್ಕಲ್ ಪೊಲೀಸ್ ಠಾಣೆಗೆ ಹಾಜರಾಗಬೇಕು.
2022ರ ಜುಲೈ 28ರಂದು ಮಂಗಳೂರಿನ ಸುರತ್ಕಲ್‌ನಲ್ಲಿರುವ ಬೀ ಜೇ ಬಟ್ಟೆ ಅಂಗಡಿಯಲ್ಲಿ 23 ವರ್ಷದ ಮೊಹಮ್ಮದ್ ಫಾಝಿಲ್ ಎಂಬಾತನನ್ನು ನಾಲ್ವರು ಮುಸುಕುಧಾರಿಗಳ ತಂಡ ಕಡಿದು ಹತ್ಯೆ ಮಾಡಿತ್ತು. ಬೆಳ್ಳಾರೆ ಗ್ರಾಮದಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (32) ಹತ್ಯೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡದಲ್ಲಿ ಉದ್ವಿಗ್ನತೆಯ ನಡುವೆ ಈ ಕೊಲೆ ನಡೆದಿದೆ. ಒಟ್ಟು 8 ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಐವರು ಈಗಾಗಲೇ ಜಾಮೀನು ಪಡೆದಿದ್ದಾರೆ.