ಸಮಗ್ರ ನ್ಯೂಸ್: ಲೋಕಸಭಾ ರಣರಂಗ ಈಗಾಗಲೇ ನಡೆಯುತ್ತಿದೆ. ಕೆಲವರಿಗೆ ಟಿಕೆಟ್ ಸಿಕ್ಕರೆ ಇನ್ನೂ ಕೆಲವರಿಗೆ ಟಿಕೆಟ್ ಸಿಗದೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಕೆ.ಎಸ್ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.
ಇಂದು ಶಿವಮೊಗ್ಗದ ಬಂಜಾರ ಕನ್ವೆನ್ಷನ್ ಹಾಲ್ನಲ್ಲಿ ಈಶ್ವರಪ್ಪ ತಮ್ಮ ಬೆಂಬಲಿಗರ ಸಭೆ ನಡೆಸಿದರು. ಸಭೆಯಲ್ಲಿ ಮುಂದಿನ ನಡೆ ಬಗ್ಗೆ ಮುಖಂಡರ ಅಭಿಪ್ರಾಯ ಸಂಗ್ರಹಿಸಿದರು. ಬಳಿಕ ಮಾತನಾಡಿದ ಈಶ್ವರಪ್ಪ, ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಹೋಗುವುದಿಲ್ಲ ಎನ್ನುತ್ತಲ್ಲೇ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದರು. ಪಕ್ಷ ಒಂದು ಕುಟುಂಬದ ಕೈಯಲ್ಲಿ ಸಿಲುಕಿರುವುದನ್ನು ಬಿಡಿಸಲು ಸ್ಪರ್ಧೆ ಮಾಡುತ್ತೇನೆ. ನೊಂದ ಪಕ್ಷದ ಕಾರ್ಯಕರ್ತರ ಧ್ವನಿಯಾಗಿ ಸ್ಪತಂತ್ರವಾಗಿ ನಿರ್ಧರಿಸುವೆ ಎಂದು ಹೇಳಿದರು. ಈ ಮೂಲಕ ಬಿಎಸ್ ವೈ ವಿರುದ್ಧ ದನಿಎತ್ತಿದರು.
ಶಿವಮೊಗ್ಗ ಕ್ಷೇತ್ರದಲ್ಲಿ ನಾನು ಗೆದ್ದರೆ ಮೋದಿಯನ್ನೇ ಬೆಂಬಲಿಸುತ್ತೇನೆ, ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಶ್ರಮಿಸೋಣ. ಮೋದಿ ಪ್ರಧಾನಿಯಾದ ನಂತರ ನಾವೆಲ್ಲರೂ ಸೇರಿ ಸಂಭ್ರಮಿಸೋಣ. ಹಾಗಾಗಿ ಮೋದಿ, ಪಕ್ಷದ ಪರವಾಗಿ ಕೆಲಸ ಮಾಡಬೇಕೆಂದು ಈಶ್ವರಪ್ಪ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದರು.
ಈ ಹಿಂದೆ ಕಾಂತೇಶ್ ಹಾವೇರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾನೆ ಎಂದು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಪ್ರಸ್ತಾಪ ಮಾಡಲಾಗಿತ್ತು. ಬಿಎಸ್ ವೈ ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಚುನಾವಣೆ ಸಮಿತಿಯಲ್ಲಿ ಕಾಂತೇಶ್ ಹೆಸರು ಪ್ರಸ್ತಾಪವಾಗಿತ್ತು. ಆದರೆ ಬೊಮ್ಮಾಯಿ ಹೆಸರೂ ಹೇಗೆ ಬಂತು ಗೊತ್ತಿಲ್ಲ .ಅದೊಂದು ಕೆಟ್ಟ ರಾಜಕೀಯ.. ಅದರ ಬಗ್ಗೆ ನಾನು ಹೇಳುವುದಿಲ್ಲ ಎಂದು ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.