ಸಮಗ್ರ ನ್ಯೂಸ್ : ಮುಡಾ ಕಚೇರಿಯಲ್ಲಿ ಮಾ. 13ರಂದು ನಡೆದ ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಹಣದ ಬ್ಯಾಗ್ ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಸಿ.ಎ. ಸೈಮನ್ ತಿಳಿಸಿದ್ದಾರೆ.
ಮಂಗಳೂರು ಮೂಡ ಕಚೇರಿಯಲ್ಲಿ ಸಾರ್ವಜನಿಕರ ಕಡತಗಳು ವಿಲೇವಾರಿಯಾಗುತ್ತಿಲ್ಲ ಹಾಗೂ ಕಛೇರಿಯಲ್ಲಿ ಮಧ್ಯವರ್ತಿಗಳದ್ದೇ ದರ್ಬಾರು ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿತ್ತು.
ದೂರುಗಳು ಬಂದ ಹಿನ್ನೆಲೆಯಲ್ಲಿ ಮಾ. 13ರಂದು ಸಂಜೆ ದಾಳಿ ನಡೆಸಿ ರಾತ್ರಿ ಸುಮಾರು 18 ಗಂಟೆಗಳ ದೀರ್ಘಕಾಲ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಕಚೇರಿಯ ಅಧಿಕಾರಿಗಳಲ್ಲಿ ಮತ್ತು ಹಲವಾರು ವ್ಯಕ್ತಿ ಗಳಲ್ಲಿ ದೊಡ್ಡ ಮೊತ್ತದ ಹಣವಿತ್ತು.
ಪರಿಶೀಲನೆ ನಡೆಸುತ್ತಿರುವ ವೇಳೆ ಹಲವು ಸಾರ್ವಜನಿಕರು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಹಾಗೂ ಕಚೇರಿಯಲ್ಲಿ ಅಧಿಕಾರಿಗಳು ನೀಡುತ್ತಿರುವ ಕಿರುಕುಳ ಕುರಿತು ಹೇಳಿಕೊಂಡಿರುತ್ತಾರೆ. ಪರಿಶೀಲನೆ ಸಂದರ್ಭ ದೀರ್ಘಕಾಲದಿಂದ ವಿಲೇವಾರಿಯಾಗದ ಹಲವಾರು ಅರ್ಜಿದಾರರ ಕಡತಗಳು ಸಿಕ್ಕಿರುತ್ತದೆ. ಅಧಿಕಾರಿಗಳು ಬ್ರೋಕರ್ ಗಳೊಡನೆ ಫೋನ್ ಮುಖಾಂತರ ಹೊಂದಾಣಿಕೆ ಮಾಡಿಕೊಂಡು ಕಡತ ವಿಲೇವಾರಿ ಮಾಡುತ್ತಿರುವುದಾಗಿ ಸಾಕ್ಷಿ ದೊರೆತಿರುತ್ತದೆ. ಈ ಹಿನ್ನಲೆಯಲ್ಲಿ ಮೂಡ ಕಛೇರಿ ಜಾಲದ ಬಗ್ಗೆ ತನಿಖೆ ಮುಂದುವರೆದಿರುತ್ತದೆ.