ಸಮಗ್ರ ನ್ಯೂಸ್ : ಸಾರಿಗೆ ಇಲಾಖೆಯಲ್ಲಿ ಬ್ರೇಕ್ ಇನ್ಸ್ಪೆಕ್ಟರ್ ಹೆಸರಿನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡು ಅಲೆವೂರು ದುರ್ಗಾನಗರದ ವೀರೇಶ್(28) ಎಂಬವರಿಗೆ ಅಭಿಷೇಕ್ ಎನ್. ಎಂಬಾತನ ಬೆಂಗಳೂರಿನಲ್ಲಿ ಪರಿಚಯವಾಗಿದ್ದು, ಆತ ತಾನು ಸಾರಿಗೆ ಇಲಾಖೆಯಲ್ಲಿ ಬ್ರೇಕ್ ಇನ್ಸ್ಪೆಕ್ಟರ್ ಆಗಿ ಕೆಲಸವನ್ನು ಮಾಡಿ ಕೊಂಡಿರುವುದಾಗಿ ನಂಬಿಸಿದ್ದನು.
ಅಭಿಷೇಕ್, ವೀರೇಶ್ ಮತ್ತು ಆತನ ಸ್ನೇಹಿತ ರವೀಂದ್ರ ಎಂಬವರಿಗೆ ಕೆಲಸವನ್ನು ಕೊಡಿಸುವುದಾಗಿ ನಂಬಿಸಿ, ವೀರೇಶ್ ಅವರಿಂದ 18 ಲಕ್ಷ ರೂ. ಹಣ ಹಾಗೂ ರವೀಂದ್ರ ಅವರಿಂದ 10 ಲಕ್ಷ ರೂ. ಹಣವನ್ನು ತನ್ನ ಬ್ಯಾಂಕ್ ಖಾತೆಗೆ 2021ರ ಮಾ.27ರಿಂದ 2023ರ ಆ.1ರ ನಡುವೆ ವರ್ಗಾವಣೆ ಮಾಡಿಸಿಕೊಂಡಿದ್ದನು ಎಂದು ದೂರಲಾಗಿದೆ.
ಆದರೆ ಅಭಿಷೇಕ್ ಇವರಿಬ್ಬರಿಗೆ ಈವರೆಗೂ ಯಾವುದೇ ಉದ್ಯೋಗವನ್ನು ಕೊಡಿಸದೇ, ಹಣವನ್ನು ವಾಪಸ್ಸು ಹಿಂದಿರುಗಿಸದೇ ನಂಬಿಸಿ, ವಂಚನೆ ಹಾಗೂ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.