ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆ ಘೋಷಣೆಯಾಗಲು ಕೆಲವೇ ದಿನಗಳು ಇರುವಾಗ, ಇಬ್ಬರು ಹೊಸ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಕೇಂದ್ರ ಸರ್ಕಾರದ ಸಿದ್ಧತೆಗೆ ಸುಪ್ರೀಂಕೋರ್ಟ್‍ನಲ್ಲಿ ಹಿನ್ನಡೆಯಾಗುವ ಆತಂಕ ಎದುರಾಗಿದೆ.
2023ರ ಹೊಸ ಕಾಯ್ದೆಯ ಪ್ರಕಾರ ಕೇಂದ್ರ ಚುನಾವಣಾ ಆಯುಕ್ತರನ್ನು ನೇಮಕಗೊಳಿಸುವ ಪ್ರಕ್ರಿಯೆಯ ವಿರುದ್ಧ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ಬಾಕಿಯಿರುವಾಗಲೇ ಕೇಂದ್ರ ಸರ್ಕಾರ ಆ ಕಾಯ್ದೆಯ ಪ್ರಕಾರ ಹೊಸ ಚುನಾವಣಾ ಆಯುಕ್ತರನ್ನು ನೇಮಿಸಲು ಮುಂದಾಗಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಮುಖಂಡರೊಬ್ಬರು ಸಲ್ಲಿಸಿದ ಮನವಿಯನ್ನು ವಿಚಾರಣೆಗೆ ಅಂಗೀಕರಿಸಲು ಸುಪ್ರೀಂಕೋರ್ಟ್ ಒಲವು ತೋರಿದೆ.
ಕೇಂದ್ರ ಚುನಾವಣಾ ಆಯೋಗದಲ್ಲಿ ಮೂವರು ಆಯುಕ್ತರಿರುತ್ತಾರೆ. ಒಬ್ಬರು ಕೆಲ ಸಮಯದ ಹಿಂದೆ ನಿವೃತ್ತರಾಗಿದ್ದಾರೆ. ಇನ್ನೊಬ್ಬ ಆಯುಕ್ತರಾಗಿದ್ದ ಅರುಣ್ ಗೋಯಲ್ ಮಾ.9ರಂದು ರಾಜೀನಾಮೆ ನೀಡಿದ್ದು, ಅದು ಅಂಗೀಕಾರವಾಗಿದೆ. ಈಗ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಒಬ್ಬರೇ ಉಳಿದಿದ್ದಾರೆ. ಹೀಗಾಗಿ ಮಾ.15ರಂದು ಹೊಸ ಆಯುಕ್ತರ ನೇಮಕಕ್ಕೆ ಮೋದಿ ನೇತೃತ್ವದಲ್ಲಿ ಸಭೆ ನಿಗದಿಯಾಗಿದೆ. 2023ರ ಕಾಯ್ದೆಯನ್ನು ಪ್ರಶ್ನಿಸಿದ್ದ ಕಾಂಗ್ರೆಸ್‍ನ ಜಯಾ ಠಾಕೂರ್ ಸೋಮವಾರ ತಮ್ಮ ವಕೀಲರ ಮೂಲಕ ಈ ವಿಷಯವನ್ನು ಸುಪ್ರೀಂಕೋರ್ಟ್‍ನ ಗಮನಕ್ಕೆ ತಂದು, ತುರ್ತು ವಿಚಾರಣೆ ನಡೆಸಬೇಕೆಂದು ಕೋರಿದರು. ಆಗ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ‘ನಮಗೆ ಇ-ಮೇಲ್ ಕಳುಹಿಸಿ. ನೋಡುತ್ತೇವೆ’ ಎಂದು ಹೇಳಿದರು.