ಸಮಗ್ರ ನ್ಯೂಸ್ : ಜರ್ಮನಿಯಿಂದ ಪಾರ್ಸೆಲ್ ಕಳುಹಿಸಿರುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಅರ್ಧ ಕೋಟಿಗೂ ಹೆಚ್ಚು ವಂಚಿಸಿರುವ ಪ್ರಕರಣ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮಿಹಿಯಾಲ್ ನಿಲ್ಜೆನ್ ಎಂಬಾತ ತಾನು ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂಬುದಾಗಿ ನಂಬಿಸಿ ಫೆ.10ರಂದು ಫೇಸ್‍ಬುಕ್‍ನಲ್ಲಿ ಪೇತ್ರಿಯ ಲವೀನಾ ಸ್ಟೆಫನಿ ಕ್ರಾಸ್ಟೊ(42) ಎಂಬವರನ್ನು ಪರಿಚಯ ಮಾಡಿಕೊಂಡಿದ್ದನು.
ನಂತರ ವಾಟ್ಸಪ್ ಮೂಲಕ ಇವರು ಚಾಟಿಂಗ್ ನಡೆಸಿ ಸ್ನೇಹಿತರಾಗಿದ್ದರು. ಆತ ಲವೀನಾಗೆ ಗಿಫ್ಟ್ ಕಳುಹಿಸುವುದಾಗಿ ನಂಬಿಸಿದ್ದು ಫೆ.15ರಂದು ಲವೀನಾಗೆ ದೆಹಲಿಯ ಪಾರ್ಸೆಲ್ ಕಚೇರಿ ಎಂಬುದಾಗಿ ಅಪರಿಚಿತ ವ್ಯಕ್ತಿ ಕರೆ ಮಾಡಿ ಜರ್ಮನಿಯಿಂದ ಬಂದಿರುವ ಪಾರ್ಸೆಲ್‍ನಲ್ಲಿ ಜ್ಯುವೆಲ್ಲರಿ, ಯುರೋ ಕರೆನ್ಸಿ ಇದ್ದು ಈ ಬಗ್ಗೆ ಪಾರ್ಸೆಲ್ ಪಡೆಯಲು ಪಾರ್ಸೆಲ್ ಚಾರ್ಜ್, ಮನಿ ಲ್ಯಾಂಡಿಂಗ್ ಸರ್ಟಿಫಿಕೇಟ್, ಕಸ್ಟಂ ಸರ್ಟಿಫಿಕೇಟ್ ಪಡೆಯಲು ಹಣ ಪಾವತಿಸ ಬೇಕು ಎಂದು ತಿಳಿಸಿದ್ದನು.
ಅದನ್ನು ನಂಬಿದ ಲವೀನಾ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 54,74,000ರೂ. ಹಣವನ್ನು ಆನ್‍ಲೈನ್ ಮೂಲಕ ಪಾವತಿಸಿದ್ದರು. ಆದರೆ ಆರೋಪಿಗಳು ಗಿಫ್ಟ್ ಕೊಡದೆ ಹಣವನ್ನೂ ವಾಪಾಸ್ಸು ನೀಡದೆ ಲವೀನಾ ಅವರಿಗೆ ಮೋಸ ಮಾಡಿರುವುದಾಗಿ ದೂರಲಾಗಿದೆ.