ಸಮಗ್ರ ನ್ಯೂಸ್ : ಕೇಂದ್ರ ಸರಕಾರ ಜನರನ್ನು ಭಯಭೀತರನ್ನಾಗಿಸುತ್ತಿದೆ. ಭಾರತದಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ನಮಗೆ ಅರಿವಿದೆ. ಹೊರದೇಶಗಳಲ್ಲಿ ಸಮಾನತೆ, ವಸುದೈವ ಕುಟುಂಬಕಂ ಎಂಬ ಆಶಯದೊಂದಿಗೆ ಮಾತನಾಡುವ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಅದನ್ನು ಪಾಲಿಸುವಲ್ಲಿ ವಿಫಲವಾಗಿದ್ದಾರೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಮುಹಮ್ಮದ್ ಶಾಫಿ ಆರೋಪಿಸಿದ್ದಾರೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷ ವತಿಯಿಂದ ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನ ಆವರಣದಲ್ಲಿ ಆಯೋಜಿಸಲಾದ ಪ್ರಜಾಪ್ರಭುತ್ವ ಸಂರಕ್ಷಣಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ 370 ನೇ ವಿಧಿಯೊಂದಿಗೆ ಕಾಶ್ಮೀರದ ಜನತೆಗೆ ಎಲ್ಲ ಹಕ್ಕು ನೀಡುವ ವಾಗ್ದಾನ ಮಾಡಿದ್ದರು. ಕಾಶ್ಮೀರ ಮತ್ತು ಕಾಶ್ಮೀರಿಗಳು ನಮ್ಮವರು ಎಂದಿದ್ದರು. ಆದರೆ ಇಂದು ನಮ್ಮ ಪ್ರಧಾನಿ ಇದು ಹೊಸ ಕಾಶ್ಮೀರ ಎನ್ನುತ್ತಿದ್ದಾರೆ. ಅಲ್ಲಿ ಈಗ ಭಯದ ವಾತಾವರಣವಿದೆ. ವಾಸ್ತವದಲ್ಲಿ ಭಯವಿಲ್ಲದ ವಾತಾವರಣ ಸೃಷ್ಟಿಸುವುದು ಪ್ರಧಾನಿಯ ಕರ್ತವ್ಯವಾಗಿತ್ತು. ಕೇಂದ್ರ ಸರಕಾರ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ಕಾಶ್ಮೀರದ ಸಹೋದರರ ಹಕ್ಕಿನ ಮೇಲೆ ಪ್ರಹಾರ ನಡೆಸಿದೆ ಎಂದು ಅವರು ದೂರಿದರು.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಕೇರಳ ಉಪಾಧ್ಯಕ್ಷ ತುಳಸಿ ಧರಣ್ ಪಲ್ಲಿಕಲ್, ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ, ಪ್ರೊ.ಸೈಯ್ಯದ್ ಸಾದಿಯಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಮಾತನಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಭಾಸ್ಕರ್ ಪ್ರಸಾದ್, ಮುಖಂಡ ರಾದ ಅಬ್ದುಲ್ ಲತೀಫ್ ಪುತ್ತೂರು, ನಸ್ರೀಯಾ ಬೆಳ್ಳಾರೆ, ಅನ್ವರ್ ಸಾದಾತ್, ನಾಝಿಯಾ ನಸ್ರುಲ್ಲಾ, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಬಾವಾ, ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ಅಝೀಝ್ ಮೊದಲಾದವರು ಉಪಸ್ಥಿತರಿದ್ದರು.
ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ದಿಕ್ಸೂಚಿ ಭಾಷಣ ಮಾಡಿದರು. ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಆಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹನೀಫ್ ಮೂಳೂರು ವಂದಿಸಿದರು. ಯಾಸೀನ್ ಕಾರ್ಯಕ್ರಮ ನಿರೂಪಿಸಿದರು.