ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ದಿನಗಣನೆ ಶುರುವಾಗುತ್ತಿರುವಂತೆ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ಹೆಚ್ಚಾಗುತ್ತಿರುವ ನಡುವೆ ದ.ಕ ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿಯ ನಡೆಯನ್ನು ಕಾಂಗ್ರೆಸ್ ತೆಗೆದುಕೊಳ್ಳುವ ನಿರ್ಧಾರ ಕೈಗೊಂಡಿದೆ.
ತೀರಾ ಕುತೂಹಲದ ಕ್ಷೇತ್ರವಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನ ಪ್ರಮುಖ ಮೂರು ಅಭ್ಯರ್ಥಿ ಆಕಾಂಕ್ಷಿಗಳ ಪೈಕಿ ಭರವಸೆಯ ಒಕ್ಕಲಿಗ ಗೌಡ ಯುವನಾಯಕ ಸುಳ್ಯ ಮೂಲದ ಕಿರಣ್ ಬುಡ್ಲೆಗುತ್ತು ಹೆಸರು ಪ್ರಬಲ ಚಾಲ್ತಿಯೊಂದಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆ ಜೊತೆ ಮತ್ತೊರ್ವ ಸುಳ್ಯದ ಒಕ್ಕಲಿಗರಾದ ರಾಧಾಕೃಷ್ಣ ಬೊಳ್ಳೂರು ಅವರಿಗೆ ದೊರೆತಿರುವುದು ಮಂಗಳೂರನ್ಬು ಗೆದ್ದೇ ಗೆಲ್ಲುವ ಪಣತೊಟ್ಟಂತಿದೆ ಎಂಬ ಅಭಿಪ್ರಾಯ ವ್ಯಕ್ತಗೊಂಡಿದೆ.
ಕಾಂಗ್ರೆಸ್ ನ್ನು ಮಣಿಸಿ ಬಿಜೆಪಿ ಮೂರು ದಶಕಗಳ ಕಾಲ ಹಿಡಿದಿಟ್ಟುಕೊಂಡಿದ್ದ ನಿರಂತರ ಗೆಲುವಿನ ನಾಗಾಲೋಟಕ್ಕೆ ಈ ಬಾರಿ ಬ್ರೇಕ್ ಹಾಕಲು ತೀರ್ಮಾನಿಸಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಮಾಜಿ ಸಚಿವ, ಹಿರಿಯ ನಾಯಕ ಬಿ.ರಮಾನಾಥ ರೈ, ಬಿಲ್ಲವ ಸಮುದಾಯದ ಪದ್ಮರಾಜ್ ಕುದ್ರೋಳಿ ಜೊತೆಗೆ ಕಿರಣ್ ಬುಡ್ಲೆಗುತ್ತು ಹೆಸರು ಉಳಿದಿಬ್ಬರಿಗಿಂತ ಸಾಕಷ್ಟು ಹೈಕಮಾಂಡ್ ನಿಂದ ಮುನ್ನಲೆಗೆ ಬಂದಿದ್ದು , ಕಾಂಗ್ರೆಸ್ ಮಾತ್ರವಲ್ಲದೇ ಬಿಜೆಪಿ ನಾಯಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜೊತೆಗೆ ಸಜ್ಜನ ನಾಯಕತ್ವ ಗುಣಗಳೊಂದಿಗೆ ಆತ್ಮೀಯತೆ ವಿವಿಧ ಪಕ್ಷಗಳ ಯುವ ನಾಯಕರಾದಿಯಾಗಿ ಜಿಲ್ಲೆಯಲ್ಲಿ ಬಾರೀ ಸಂಚಲನ ಮೂಡಿಸಿತ್ತು.
ಎರಡೂ ರಾಷ್ಟ್ರೀಯ ಪಕ್ಷಗಳು ಒಕ್ಕಲಿಗ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿದ್ಯ ನೀಡದೆ ಮೂಲೆಗುಂಪು ಮಾಡಲಾಗಿದೆ ಎಂಬ ಅಸಮಾಧಾನದ ಸ್ಪೋಟ ಕಾವೇರಿದ್ದನ್ನು ಮನಗಂಡ ಪಕ್ಷಗಳು ತಾಲೂಕಿನಿಂದ ದ.ಕ.ಜಿಲ್ಲಾ ಮಟ್ಟದವರೆಗೆ ವಿವಿಧ ಆಯಕಟ್ಟಿನ ಸ್ಥಾನಗಳನ್ನ ಹಂತಹಂತವಾಗಿ ಬಿಜೆಪಿ ನೀಡುತ್ತಿದ್ದಂತೆ ಇತ್ತ ಕಾಂಗ್ರೆಸ್ ಕೂಡ ಪೈಪೋಟಿಯೆಂಬಂತೆ ಪ್ರಧಾನ ಕಾರ್ಯದರ್ಶಿ ಹಾಗು ಕಾರ್ಯದರ್ಶಿ ಸ್ಥಾನವನ್ನು ಇದೀಗ ಏಕಕಾಲಕ್ಕೆ ಘೋಷಣೆ ಮಾಡಿದ್ದು ಗಮನಾರ್ಹ.
ಕಾಂಗ್ರೆಸ್ ನ ಅತ್ಯುನ್ನತ ನಾಯಕರ ಹಾಗೂ ಒಕ್ಕಲಿಗರ ಸಂಘ, ಮಠಾಧೀಶರೊಂದಿಗಿನ ನಿಕಟ ಸಂಪರ್ಕ ಹಾಗು ಏಕಕಾಲಕ್ಕೆ ಕಾರ್ಯದರ್ಶಿ ಹುದ್ದೆಗಳೆರಡನ್ನೂ ಸುಳ್ಯದ ಒಕ್ಕಲಿಗ ಸಮುದಾಯಕ್ಕೆ ನೀಡಿರುವ ಲೆಕ್ಕಾಚಾರವೂ ಕಿರಣ್ ಬುಡ್ಲೆಗುತ್ತು ರನ್ನು ಮತ್ತಷ್ಟು ಮುನ್ನಲೆಗೆ ತರುವ ಕೈ ಮುಖಂಡರ ಚಾಣಾಕ್ಯ ನಡೆಯ ರಹಸ್ಯ. ರಾಜ್ಯ ಅಥವಾ ಕೇಂದ್ರದ ಪ್ರಮುಖ ಸ್ಥಾನಮಾನಕ್ಕೆ ಪರಿಗಣಿಸುವ ಮುನ್ಸೂಚನೆ ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರ. ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾಗಿ ಸುಳ್ಯ ಮೂಲದ ಮತ್ತೋರ್ವ ಒಕ್ಕಲಿಗ ಮಾಜಿ ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ ಅವರಿಗೆ ಈ ಹಿಂದೆ ನೀಡಿರುವುದು ಗಮನಾರ್ಹ. ಮೂವರ ಪೈಕಿ 42 ರ ಹರೆಯದ ಯುವ ನಾಯಕನಿಗೆ ಪ್ರ.ಕಾರ್ಯದರ್ಶಿ ಹುದ್ದೆ ದೊಡ್ಡ ಮಟ್ಟಿನ ಬೆಳವಣಿಗೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಹಿರಿ ಕಿರಿಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಕಿರಣ್ ಗೆ ಟಿಕೆಟ್ ನೀಡಿದರೆ ಯಾರಿಗೂ ಅಸಮಾಧಾನ ಉಂಟಾಗದು ಎಂಬ ಅಭಿಪ್ರಾಯವೂ ಪಕ್ಷದ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ದ.ಕ ಜಿಲ್ಲೆಯಲ್ಲಿ ಸದ್ಯ ಒಕ್ಕಲಿಗರು ಒಗ್ಗಟ್ಟಾಗಿರುವುದರ ಜೊತೆಗೆ ಸೋಲು ಗೆಲುವಿನ ನಿರ್ಣಾಯಕ ಪಾತ್ರ ವಹಿಸಿರುವುದೂ ಸತ್ಯ. ಈ ಹಿನ್ನಲೆಯಲ್ಲಿ ಇದೇ ಟ್ರಂಪ್ ಕಾರ್ಡ್ ಬಳಸಿ ಕಾಂಗ್ರೆಸ್ ಯುವ ನಾಯಕ ಕಿರಣ್ ಗೆ ಟಿಕೆಟ್ ನೀಡಿದರೆ ಅಚ್ಚರಿಯೇನಲ್ಲ. ಒಟ್ಟಾರೆ ಕ್ಷೇತ್ರವನ್ನು ಗೆದ್ದೇ ಗೆಲ್ಲುವ ಜಿದ್ದಿಗೆ ಬಿದ್ದಿರುವ ‘ಕೈ’ ಪಾರ್ಟಿ ಕಿರಣ್ ಕೈ ಹಿಡಿಯುವುದು ಬಹುತೇಕ ಪಕ್ಕಾ ಎಂಬ ಮಾತು ಹೈಕಮಾಂಡ್ ಮಟ್ಟದಲ್ಲಿ ಕೇಳಿಬರುತ್ತಿದೆ.