ಸಮಗ್ರ ನ್ಯೂಸ್ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲ್‌ಗೆ ಮತ್ತೆ ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿ ರಾಷ್ಟ್ರೀಯ ನಾಯಕರ ಕೋರ್ ಕಮಿಟಿ ಸಭೆಯಲ್ಲಿ ನಳಿನ್‌ಗೆ ಮತ್ತೆ ಟಿಕೆಟ್ ಕೊಡಿಸುವ ಬಗ್ಗೆ ಪ್ರಸ್ತಾಪವಾಗಿದೆ ಎನ್ನಲಾಗಿದೆ.
ಇಂದು ಸಂಜೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಕೊನೆ ಹಂತದ ಬದಲವಾಣೆ ನಡೆಯದೇ ಇದ್ದರೆ ನಳಿನ್‌ಗೆ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ. ಆದರೆ ಕೊನೆ ಹಂತದಲ್ಲಿ ನಾಯಕರು ಬದಲಾವಣೆ ಬಯಸಿದರೆ ಮಾತ್ರ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ಇದೆ.
ಕ್ಯಾಪ್ಟನ್ ಬೃಜೇಶ್ ಚೌಟ ಅವರ ಹೆಸರು ಕೂಡಾ ಮುನ್ನಲೆಗೆ ಬಂದಿದ್ದು, ಅಂತಿಮನಿರ್ಧಾರವನ್ನು ವರಿಷ್ಠರಿಗೆ ಬಿಡಲಾಗಿದೆ. ಸಮೀಕ್ಷೆ, ಕಾರ್ಯಕರ್ತರ ಅಭಿಪ್ರಾಯ, ಹಾಗೂ ಅಭಿವೃದ್ಧಿಗಳ ಪಕ್ಷಿನೋಟದಂತೆ ಟಿಕೆಟ್ ನೀಡಲು ಕಮಲ ಹೈಕಮಾಂಡ್ ಮುಂದಾಗಿದೆ. ವಿಶೇಷವೆಂದರೆ ಟಿಕೆಟ್ ಕೊಡಬಾರದೆಂದು ವಿರೋಧವಿರುವ ಬಿಜೆಪಿಯ 7 ಮಂದಿ ಹಾಲಿ ಸಂಸದರ ಪರ ಯಡಿಯೂರಪ್ಪ ಅವರು ಬ್ಯಾಟಿಂಗ್ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಉತ್ತರದಲ್ಲಿ ಡಿ. ವಿ. ಸದಾನಂದ ಗೌಡ, ಮಂಡ್ಯದಲ್ಲಿ ಜೆಡಿಎಸ್, ಮೈಸೂರಿನಲ್ಲಿ ಪ್ರತಾಪ್ ಸಿಂಹ , ಉತ್ತರ ಕನ್ನಡದಲ್ಲಿ ಅನಂತ್ ಕುಮಾರ್ ಹೆಗಡೆ ಪರ, ಬೀದರನಲ್ಲಿ ಭಗವಂತ ಖೂಬ ಪರ, ಉಡುಪಿಯಲ್ಲಿ ಶೋಭಾ ಕರಂದ್ಲಾಜೆ, ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲು ಹೆಸರು ಶಿಫಾರಸ್ಸು ಮಾಡುವಂತೆ ಯಡಿಯೂರಪ್ಪ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ನಾಳೆ ಅಂದರೆ ಮಾರ್ಚ್ 10 ರಂದು ದೆಹಲಿಯಲ್ಲಿ ಮತ್ತೊಂದು ಸುತ್ತಿನ ಬಿಜೆಪಿ ಚುನಾವಣಾ ಕೋರ್ ಸಭೆ ನಡೆಯಲಿದ್ದು, ಮೋದಿ, ನಡ್ಡಾ, ಅಮಿತ್ ಶಾ ಹಾಗೂ ಕರ್ನಾಟಕದಿಂದ ಬಿ ಎಸ್ ವೈ ಅವರು ಪಾಲ್ಗೊಳ್ಳಲಿದ್ದಾರೆ. ನಾಳೆ ಸಂಜೆಯೊಳಗೆ ಬಿಜೆಪಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಫೈನಲ್ ಆಗಲಿದ್ದು ಕೊನೆ ಹಂತದ ಬದಲಾವಣೆ ಹೊರತಾಗಿ ರಾಜ್ಯದಲ್ಲಿ ಯಡಿಯೂರಪ್ಪ ಸೂಚಿಸಿದ ವ್ಯಕ್ತಿಗಳಿಗೆ ಟಿಕೆಟ್ ಸಿಗಬಹುದು ಎನ್ನಲಾಗಿದೆ.
ಒಂದು ವೇಳೆ ಇದೆಲ್ಲಾ ನಿಜವಾಗಿದ್ದರೆ ನಳಿನ್ ಕುಮಾರ್ ಕಟೀಲು ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸತತ 4 ನೇ ಬಾರಿಗೆ ಬಿಜೆಪಿಯಿಂದ ಎಂಪಿ ಟಿಕೆಟ್ ಪಡೆದಂತಾಗುತ್ತದೆ.