ಸಮಗ್ರ ನ್ಯೂಸ್ :ಭಯೋತ್ಪಾದನಾ ವಿರೋಧಿ ವೇದಿಕೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡನ ಭಾವಚಿತ್ರಕ್ಕೆ ಉಗಿದು ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಘಟನೆ ಉಡುಪಿಯ ಅಜ್ಜರಕಾಡಿನಲ್ಲಿ ನಡೆದಿದೆ.
ಮಂಗಳೂರಿನ ಕಾಂಗ್ರೆಸ್ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿರುವ ಎಂ.ಜಿ.ಹೆಗಡೆ ಅವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಉಗಿದು ಆಕ್ರೋಶ ವ್ಯಕ್ತಪಡಿಸಲಾಗಿದ್ದು, ಶಕ್ತಿ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಉಡುಪಿಯ ಅಜ್ಜರಕಾಡಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
ಈ ವೇಳೆ ಎಂ.ಜಿ. ಹೆಗಡೆಯವರ ವಿರುದ್ಧ ಕಾರ್ಯಕರ್ತರು ಈ ರೀತಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕ್ ಪರ ಘೋಷಣೆ ಕೂಗಿದವರ ಪರ ವಾದಿಸಿದ್ದ ಹೆಗಡೆ ಇದನ್ನು ಪ್ರಸಾರ ಮಾಡಿದ್ದ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆರೋಪ ಸಾಬೀತಾಗದೆ ಇದ್ರೆ ಮಾಧ್ಯಮದವರ ಮುಖಕ್ಕೆ ಉಗಿಯಿರಿ ಎಂದು ಬಹಿರಂಗವಾಗಿ ಹೇಳಿದ್ದರು.
ಮಾಧ್ಯಮವೊಂದರ ಸಂದರ್ಶನ ವೇಳೆ ಈ ಹೇಳಿಕೆ ನೀಡಿದ್ದ ಎಂ.ಜಿ.ಹೆಗಡೆ ಆರೋಪ ಸಾಬೀತು ಪಡಿಸಿ ಎಂದು ಸವಾಲು ಹಾಕಿದ್ದರು. ಹೆಗಡೆಯವರ ಈ ಹೇಳಿಕೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದು, ಎಫ್‍ಎಸ್‍ಎಲ್ ವರದಿ ಬಂದು ಆರೋಪಿಗಳು ಬಂಧನವಾಗುತ್ತಲೇ ಎಂ.ಜಿ.ಹೆಗಡೆ ಟ್ರೋಲ್ ಆಗಿದ್ದರು. ಇದೀಗ ಉಡುಪಿಯಲ್ಲಿ ಅವರ ಭಾವ ಚಿತ್ರಕ್ಕೆ ಎಲೆ ಅಡಿಕೆ ಜಗಿದು ಉಗಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ ಹಲವು ಬಿಜೆಪಿ ನಾಯಕರು ಬೀಡ ಜಗಿದು ಎಂ.ಜಿ.ಹೆಗಡೆ ಭಾವಚಿತ್ರಕ್ಕೆ ಉಗಿದಿದ್ದಾರೆ.