ಸಮಗ್ರ ನ್ಯೂಸ್: ದೇಶಿಯ ಮಹಿಳಾ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿ ಆಯೋಜಿಸುವುದಾಗಿ ಬಿಸಿಸಿಐ ಶುಕ್ರವಾರ ಘೋಷಿಸಿದೆ. ಆರು ವರ್ಷಗಳ ಬಳಿಕ ಈ ಟೂರ್ನಿ ಆಯೋಜಿಸಲಾಗುತ್ತಿದ್ದು, ಮಾ.28ರಿಂದ ಪುಣೆಯಲ್ಲಿ ಹಿರಿಯರ ಅಂತರ್ ವಲಯ ಟೂರ್ನಿ ಆರಂಭವಾಗಲಿದೆ. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಆತಿಥ್ಯ ವಹಿಸಲಿದೆ.
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ ಹಾಗೂ ಈಶಾನ್ಯ ವಲಯ ಸೇರಿ ಒಟ್ಟು 6 ತಂಡಗಳು ಭಾಗಿಯಾಗಲಿದ್ದು, ಪ್ರತಿ ತಂಡ 5 ಪಂದ್ಯಗಳನ್ನಾಡಲಿದ್ದು, ಈ ಬಾರಿ ಪಂದ್ಯ 3 ದಿನಗಳದ್ದಾಗಿರಲಿದೆ.
2018ರ ಅವೃತ್ತಿಯಲ್ಲಿ ಪಂದ್ಯ 2 ದಿನಕ್ಕೆ ಸೀಮಿತವಾಗಿತ್ತು. ಟೂರ್ನಿಯೂ 28ರಿಂದ ಪೂರ್ವ ವಲಯ ಮತ್ತು ಈಶಾನ್ಯ ವಲಯ, ಪಶ್ಚಿಮ ವಲಯ ಮತ್ತು ಮಧ್ಯ ವಲಯದ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯಗಳೊಂದಿಗೆ ಆರಂಭವಾಗಲಿದೆ. ಏ.3ರಂದು ಸೆಮಿಫೈನಲ್ ನಿಗದಿಯಾಗಿದೆ. ಫೈನಲ್ ಪಂದ್ಯ ಏ.9ರಿಂದ ಆರಂಭವಾಗಲಿದೆ.
ಬಿಸಿಸಿಐನ ಕ್ರಮ ಸ್ವಾಗತಾರ್ಹ. ರಾಷ್ಟ್ರೀಯ ತಂಡವು ಮತ್ತೆ ಟೆಸ್ಟ್ ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ಮುಂದಿನ ಪೀಳಿಗೆ ಕ್ರಿಕೆಟಿಗರು ದೇಸೀಯ ಟೆಸ್ಟ್ ಕ್ರಿಕೆಟ್ ಆಡುವ ಅಗತ್ಯವಿದೆ ಎಂದು ಭಾರತ ಮಹಿಳಾ ತಂಡದ ಮಾಜಿ ವೇಗಿ ಅಮಿತಾ ಶರ್ಮಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ವಲಯ ಮಟ್ಟದಲ್ಲಿ ಅಷ್ಟೇ ಅಲ್ಲದೆ ರಾಜ್ಯ ಮಟ್ಟದಲ್ಲಿ ಟೆಸ್ಟ್ ಕ್ರಿಕೆಟ್ ಆಡಬೇಕು ಎಂದಿದ್ದಾರೆ.