ಸಮಗ್ರ ನ್ಯೂಸ್: ಪ್ರೋ ಕಬಡ್ಡಿ ಲೀಗ್ 10ನೇ ಆವೃತ್ತಿ ಮುಕ್ತಾಯಗೊಂಡಿದೆ. ಮೂರು ತಿಂಗಳ ನಾನ್ಸ್ಟಾಪ್ ಮನರಂಜನೆಗೆ ರೋಚಕ ತೆರೆ ಬಿದ್ದಿದೆ. 2023ರ ಡಿಸೆಂಬರ್ 2ರಿಂದ 2024ರ ಮಾರ್ಚ್ 1ರವರೆಗೂ ನಡೆದ ಹರಿಯಾಣ ಸ್ಟೀಲರ್ಸ್ ತಂಡವನ್ನು ಸೋಲಿಸಿ ಪುಣೇರಿ ಪಲ್ಟನ್ ಚೊಚ್ಚಲ ಪ್ರೊ ಕಬಡ್ಡಿ ಲೀಗ್ ಗೆದ್ದುಕೊಂಡಿದೆ.
ಹೈದರಾಬಾದ್‌ನ ಗಚಿಬೌಲಿಯ ಜಿಎಂಸಿ ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಫೈನಲ್ ಪಂದ್ಯ ನಡೆಯಿತು. 10 ಋತುಗಳಲ್ಲಿ ಮೊದಲ ಬಾರಿಗೆ ಪುಣೇರಿ ಪಲ್ಟಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು.
2024ರ ಪಿಕೆಎಲ್ ನಲ್ಲಿ ಪ್ರಚಂಡ ಪ್ರದರ್ಶನ ನೀಡಿರುವ ಪುಣೇರಿ ಪಲ್ಟನ್ 22 ಲೀಗ್ ಹಂತದ ಪಂದ್ಯಗಳ ನಂತರ 17ರಲ್ಲಿ ಜಯ, 2ರಲ್ಲಿ ಸೋಲು, 3ರಲ್ಲಿ ಡ್ರಾ ಸಾಧಿಸಿ ಒಟ್ಟು 96 ಪಾಯಿಂಟ್ಸ್ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿತ್ತು. ಮೊದಲ ಸೆಮಿ ಫೈನಲ್ ನಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು 37-21 ಅಂಕದಿಂದ ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿತ್ತು. 10ನೇ ಆವೃತ್ತಿಯ ಟೂರ್ನಿಯಲ್ಲಿ ಇದೀಗ 19ನೇ ಗೆಲುವು ದಾಖಲಿಸಿ ಪ್ರಶಸ್ತಿಗೆ ಮುತ್ತಿಟ್ಟಿದೆ.
ಮತ್ತೊಂದೆಡೆ ಜೈದೀಪ್ ದಹಿಯಾ ನಾಯಕತ್ವದ ಹರ್ಯಾಣ ಸ್ಟೀಲರ್ಸ್ ತಂಡ ಈ ಋತುವಿನಲ್ಲಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿತ್ತು. ಹರ್ಯಾಣ ಫೆ.28ರಂದು ನಡೆದಿದ್ದ 2ನೇ ಸೆಮಿ ಫೈನಲ್ ನಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 31-27 ಅಂಕದ ಅಂತರದಿಂದ ರೋಚಕವಾಗಿ ಸೋಲಿಸಿತ್ತು.
ಹರ್ಯಾಣ ಲೀಗ್ ಹಂತದಲ್ಲಿ 13ರಲ್ಲಿ ಜಯ, 8ರಲ್ಲಿ ಸೋಲು ಹಾಗೂ ಒಂದರಲ್ಲಿ ಡ್ರಾ ಸಾಧಿಸಿ ಒಟ್ಟು 70 ಅಂಕ ಗಳಿಸಿತು. ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿತ್ತು. 2ನೇ ಎಲಿಮಿನೇಟರ್ ಸುತ್ತಿನಲ್ಲಿ ಗುಜರಾತ್ ಜಯಂಟ್ಸ್ ತಂಡವನ್ನು ಸೋಲಿಸಿ ಸೆಮಿ ಫೈನಲ್ ಗೆ ಪ್ರವೇಶಿಸಿತ್ತು.