ಸಮಗ್ರ ನ್ಯೂಸ್: 2024-25ನೇ ಸಾಲಿನ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್(BBMP Budget) ಘೋಷಣೆ ಮಾಡಲಾಗಿದೆ. ಇದರಲ್ಲಿ ಬೆಂಗಳೂರಿನ ನೂರು ಕಡೆಗಳಲ್ಲಿ ಮಹಿಳೆಯರಿಗಾಗಿ ‘ಶಿ ಟಾಯ್ಲೆಟ್ ಗಳ ನಿರ್ಮಾಣ, ಪೌರಕಾರ್ಮಿಕರ ವಿಶ್ರಾಂತಿ ತಾಣಕ್ಕೆ 10 ಕೋಟಿ ರೂ. ಅನುದಾನ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಬಿಬಿಎಂಪಿ ವಿಶೇಷ ಅಯುಕ್ತ ಶಿವಾನಂದ ಕಲ್ಕೆರಿ ಬೆಂಗಳೂರಿನ ಟೌನ್ ಹಾಲ್ನಲ್ಲಿ ಬಜೆಟ್ ಮಂಡನೆ ಮಾಡಿದರು.
ಪೌರಕಾರ್ಮಿಕರಿಗೆ ‘ಶರಣೆ ಸತ್ಯಕ್ಕ’ ಪ್ರಶಸ್ತಿ ನೀಡಲು ಹಾಗೂ ಪ್ರಶಸ್ತಿ ಜೊತೆಗೆ 50 ಸಾವಿರ ರೂ. ಬಹುಮಾನ ನೀಡುವ ಬಗ್ಗೆಯೂ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ 11,307 ಪೌರ ಕಾರ್ಮಿಕರ ನೇರ ನೇಮಕಾತಿ ಮಾಡುವುದಾಗಿ ಬಜೆಟ್ನಲ್ಲಿ ಭರವಸೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ಮೂಡಿಸಲು ‘ಹಸಿರುರಕ್ಷಕ’ ಆ್ಯಪ್, ರಸ್ತೆ ಬದಿ, ಪಾರ್ಕ್, ಕೆರೆ ಅಂಗಳದಲ್ಲಿ 2 ಲಕ್ಷ ಸಸಿ ನೆಡಲು ನಿರ್ಧರಿಸಿರುವುದಾಗಿ ಘೋಷಣೆ ಮಾಡಲಾಗಿದೆ. ದಾಸರಹಳ್ಳಿ, ಯಲಹಂಕ ವಲಯದಲ್ಲಿ ಹೈಟೆಕ್ ಸಸ್ಯಕ್ಷೇತ್ರ ಸ್ಥಾಪನೆ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಹೈಟೆಕ್ ಸಸ್ಯಕ್ಷೇತ್ರ ಸ್ಥಾಪನೆಗೆ 14 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.ಬನ್ನೇರುಘಟ್ಟ ಉದ್ಯಾನ ವನಕ್ಕೆ 1 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಇದಲ್ಲದೆ, ಬೆಂಗಳೂರಿನಲ್ಲಿ ಹೊಸದಾಗಿ 50 ಇಂದಿರಾ ಕ್ಯಾಂಟೀನ್ ಸ್ಥಾಪನೆ, ಮೊಬೈಲ್ ಕ್ಯಾಂಟೀನ್ ಸ್ಥಾಪಿಸಲು 70 ಕೋಟಿ ರೂ. ಮೀಸಲು ಇಡುವುದಾಗಿ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
ಇನ್ನೂ ಬಜೆಟ್ ನಲ್ಲಿ ಘೋಷಣೆಯಾದ ಅಂಶಗಳು:
*ಬೆಂಗಳೂರು ನಗರದಲ್ಲಿ ವೈಟ್ ಟಾಪಿಂಗ್ ರಸ್ತೆಗೆ 800 ಕೋಟಿ ರೂ.
*ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಸಂಪರ್ಕ ಮೇಲ್ಸೇತುವೆಗೆ 380 ಕೋಟಿ ರೂ.
*ಸಂಯುಕ್ತ ಮೆಟ್ರೋ, ರಸ್ತೆ ಮೇಲ್ಸೇತುವೆಗೆ 100 ಕೋಟಿ ರೂ. ಅನುದಾನ.
*ಘನತ್ಯಾಜ್ಯ ಸಂಗ್ರಹಣೆ, ವಿಂಗಡನೆ, ಭೂಭರ್ತಿ ಪ್ರದೇಶ ಅಭಿವೃದ್ಧಿಗೆ 1 ಸಾವಿರ ಕೋಟಿ ಮೀಸಲು.
*ಮೊದಲ ಹಂತದಲ್ಲಿ ಬೇಗೂರಿನ ರಮಣಶ್ರೀ ಲೇಔಟ್ನಲ್ಲಿ 200 ಮನೆಗಳಿಂದ ಹಸಿ-ಒಣ ತ್ಯಾಜ್ಯ ಸಂಗ್ರಹಿಸಿ ರೀ ಸೈಕ್ಲಿಂಗ್
*ಅಪಘಾತಕ್ಕೀಡಾದ ವನ್ಯಜೀವಿಗಳ ರಕ್ಷಣೆಗೆ ಬನ್ನೇರುಘಟ್ಟ ಉದ್ಯಾನ ವನಕ್ಕೆ 1 ಕೋಟಿ ರೂ. ಮೀಸಲು.
ಇನ್ನೂ ಬಿಬಿಎಂಪಿ ಬಜೆಟ್ನಲ್ಲಿ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಗೆ ಸುಗಮ ಸಂಚಾರ, ಸ್ವಚ್ಚ ಬೆಂಗಳೂರು, ಹಸಿರು ಬೆಂಗಳೂರು, ಆರೋಗ್ಯಕರ ಬೆಂಗಳೂರು
ಶಿಕ್ಷಣ ಬೆಂಗಳೂರು, ಟೆಕ್ ಬೆಂಗಳೂರು, ವೈಬ್ರೆಂಟ್ ಬೆಂಗಳೂರು, ನೀರಿನ ಭದ್ರತೆಯ ಬೆಂಗಳೂರು ಎಂಬ 8 ವಿಭಾಗಗಳನ್ನು ಹೆಸರಿಸಲಾಯಿತು.