ಸಮಗ್ರ ನ್ಯೂಸ್: ವಿಚಾರಣೆಗೆ ಹಾಜರಾಗದೆ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದು ನ್ಯಾಯಾಲಯ ಘೋಷಿಸಿದ್ದು, ಅವರನ್ನು ಅರೆಸ್ಟ್ ಮಾಡುವಂತೆ ಪೋಲಿಸರಿಗೆ ಸೂಚನೆ ನೀಡಿದೆ.
2019ರ ಲೋಕಸಭೆ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ರಾಮಪುರದಲ್ಲಿ ಪ್ರಕರಣ ದಾಖಲಾಗಿದ್ದು, ಇದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸಮನ್ಸ್ ನೀಡಿದ ಹೊರತಾಗಿಯೂ ಜಯಪ್ರದಾ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ, ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ನ್ಯಾಯಾಲಯದಿಂದ ಜಯಪ್ರದಾ ಅವರಿಗೆ ಹಲವು ಬಾರಿ ಸಮನ್ಸ್ ಜಾರಿಯಾಗಿತ್ತು. ಅದಕ್ಕೆ ಉತ್ತರಿಸದ ಕಾರಣ, ನ್ಯಾಯಾಲಯ ವಾರೆಂಟ್ ಜಾರಿ ಮಾಡಿದೆ. ಮಾರ್ಚ್ 6ರಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ರಾಮಪುರ ಪೋಲಿಸರಿಗೆ ಕೋರ್ಟ್ ನಿರ್ದೇಶಿಸಿದೆ.
ಫೆಬ್ರವರಿ 27 ವಿಚಾರಣೆಯಲ್ಲಿ ನ್ಯಾಯಾಲಯವು ನೇರವಾಗಿ ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಿತು. ಒಂದು ತಂಡವನ್ನು ರಚಿಸಿ ಜಯಪ್ರದಾ ಅವರನ್ನು ಮಾರ್ಚ್ 6ರಂದು ವಿಚಾರಣೆಗೆ ಹಾಜರುಪಡಿಸುವಂತೆ ನ್ಯಾಯಾಲಯವು ಸೂಚಿಸಿದೆ.