ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಮಾರ್ಚ್‍ನಲ್ಲಿ, ಲೋಕಸಭೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಇನ್ನೊಬ್ಬ ಕೇಂದ್ರ ಸಚಿವ ಶಂತನು ಠಾಕೂರ್ ಅವರು ಈ ತಿಂಗಳ ಆರಂಭದಲ್ಲಿ, 2019ರಲ್ಲೇ ಸಂಸತ್ತು ಅಂಗೀಕರಿಸಿದ್ದ ಸಿಎಎ ಕಾಯ್ದೆಯನ್ನು ಚುನಾವಣೆಗೂ ಮುನ್ನ ಜಾರಿಗೆ ತರಲಾಗುವುದು ಎಂದಿದ್ದರು. ಇದರ ಪ್ರಕಾರ 2014ರ ಡಿ.31ರಂದು ಅಥವಾ ಅದಕ್ಕೂ ಮುನ್ನ ಭಾರತಕ್ಕೆ ಬಂದ ಹಿಂದೂ, ಸಿಖ್, ಜೈನ್, ಪಾರ್ಸಿ, ಬೌದ್ಧ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಲಸಿಗರಿಗೆ ಪೌರತ್ವ ನೀಡುವ ಸಿಎಎ ಮಾರ್ಚ್ ಮಧ್ಯಭಾಗದೊಳಗೆ ಇದು ಜಾರಿಗೆ ಬರುವ ಸಾಧ್ಯತೆ ಇದೆ.
ಸಿಎಎ ವಿರೋಧಿಸಿ ದಿಲ್ಲಿ ಶಾಹೀನ್ ಬಾಗ್‍ನಲ್ಲಿ ಧರಣಿ ಮತ್ತು ಅಸ್ಸಾಂನ ಗುವಾಹಟಿಯಲ್ಲಿ ಸರಣಿ ಪ್ರತಿಭಟನೆ ನಡೆದಿದ್ದವು. ಸಂಸತ್ತಿನಲ್ಲಿ ಅಂಗೀಕಾರಗೊಂಡು 4 ವರ್ಷಗಳ ನಂತರವೂ, ನಿಯಮಗಳು ಮತ್ತು ಪ್ರಕ್ರಿಯೆಯನ್ನು ಅಂತಿಮಗೊಳಿಸುವುದು ಬಾಕಿ ಇದ್ದ ಕಾರಣ ಇದು ಜಾರಿಗೆ ಬಂದಿರಲಿಲ್ಲ.