ಸಮಗ್ರ ನ್ಯೂಸ್: ಆನ್ ಲೈನ್ ಗೇಮ್ಸ್ ಗೀಳು ಅಂಟಿಸಿಕೊಂಡಿದ್ದ ಯುವಕನೋರ್ವ ಜೀವ ವಿಮಾ ಹಣಕ್ಕಾಗಿ ತನ್ನ ತಾಯಿಯನ್ನೇ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಫತೇಹ್ ಪುರದಲ್ಲಿ ನಡೆದಿದೆ.
ಹಿಮಾಂಶು ಎಂಬಾತ 50 ಲಕ್ಷ ರೂ ಹಣಕ್ಕಾಗಿ ತಾಯಿಯನ್ನು ಕೊಂದು ಆಕೆಯ ಶವವನ್ನು ಯಮುನಾ ನದಿ ತೀರದಲ್ಲಿ ಹೂತಿದ್ದಾನೆ.
ಆರೋಪಿಯು ಜನಪ್ರಿಯ ಪ್ಲಾಟ್‌ಫಾರ್ಮ್ ಝುಪಿಯಲ್ಲಿ ಗೇಮಿಂಗ್ ಗೆ ಚಟ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಸನದಿಂದ ಅವನು ಹಲವು ಬಾರಿ ನಷ್ಟ ಅನುಭವಿಸಿದ್ದ. ಇದರಿಂದ ಅವನು ಸಾಲ ಮಾಡಿದ್ದ. ಒಂದು ಹಂತದ ನಂತರ ಅವನು ಸುಮಾರು ₹ 4 ಲಕ್ಷ ಸಾಲ ಮಾಡಿದ್ದ. ಸಾಲಗಾರರಿಗೆ ಮರು ಪಾವತಿ ಮಾಡಲೆಂದು ಈತ ನಿರ್ದಯ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಿಮಾಂಶು, ತನ್ನ ತಂದೆಯ ಚಿಕ್ಕಮ್ಮನ ಚಿನ್ನಾಭರಣಗಳನ್ನು ಕದ್ದೊಯ್ದಿದ್ದ. ಅಲ್ಲದೆ ತನ್ನ ಹೆತ್ತವರಿಗೆ ತಲಾ ₹ 50 ಲಕ್ಷ ಮೌಲ್ಯದ ಜೀವ ವಿಮಾ ಪಾಲಿಸಿಗಳನ್ನು ಖರೀದಿಸಲು ಹಣವನ್ನು ಬಳಸಿದ್ದ.
ಇದಾದ ಕೆಲವೇ ದಿನಗಳಲ್ಲಿ ಆತ ತಂದೆ ಇಲ್ಲದಿದ್ದಾಗ ತಾಯಿ ಪ್ರಭಾ ಅವರನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಸೆಣಬಿನ ಚೀಲದಲ್ಲಿ ಹಾಕಿ ಅದನ್ನು ವಿಲೇವಾರಿ ಮಾಡಲು ಟ್ರ್ಯಾಕ್ಟರ್ ಮೂಲಕ ಯಮುನಾ ನದಿಯ ದಡಕ್ಕೆ ಕೊಂಡೊಯ್ದಿದ್ದ. ಚಿತ್ರಕೂಟ ದೇವಸ್ಥಾನಕ್ಕೆ ತೆರಳಿದ್ದ ಹಿಮಾಂಶುವಿನ ತಂದೆ ರೋಷನ್ ಸಿಂಗ್ ಹಿಂತಿರುಗಿ ಬಂದಾಗ ಮನೆಯಲ್ಲಿ ಪತ್ನಿ ಮತ್ತು ಮಗ ಕಾಣಲಿಲ್ಲ. ಅವನು ಸುತ್ತಮುತ್ತ ಕೇಳಿದ್ದ. ಆಗ ಅಕ್ಕಪಕ್ಕದವರು ಹಿಮಾಂಶು ಟ್ರ್ಯಾಕ್ಟರ್ ನಲ್ಲಿ ನದಿಯ ಬಳಿ ನೋಡಿದ್ದಾಗಿ ತಿಳಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ತನ್ನ ಸಾಲ ತೀರಿಸಲು ಆತ ಈ ಕೃತ್ಯ ನಡೆಸಿದ್ದ ಎಂದು ಬಾಯ್ಬಿಟ್ಟಿದ್ದಾನೆ.