ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಫೆ.29 ರಂದು ಸಭೆ ಸೇರಲಿದ್ದು, ನಂತರ 100 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಪಟ್ಟಿಯಲ್ಲಿ ಪಕ್ಷದ ಪ್ರಭಾವಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಬ್ಬರೂ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.
ಬಿಜೆಪಿಗೆ ಕಠಿಣ ಹಾದಿ ಇರುವ ಪ.ಬಂಗಾಳ ಹಾಗೂ ತಮಿಳುನಾಡಿನ ಅಭ್ಯರ್ಥಿಗಳೂ ಈ ಪಟ್ಟಿಯಲ್ಲಿ ಇರಲಿದ್ದಾರೆ. ಈಗಲೇ ಪಟ್ಟಿ ಪ್ರಕಟಿಸಿದರೆ ಅಭ್ಯರ್ಥಿಗಳು ಚುನಾವಣಾ ಸಿದ್ಧತೆಯನ್ನು ತಕ್ಷಣವೇ ಆರಂಭಿಸಲು ನೆರವಾಗಲಿದೆ. ಹೀಗಾಗಿ ಮೊದಲ ಪಟ್ಟಿಯು ನಿರ್ಣಾಯಕವಾಗಲಿದೆ. ಆಡಳಿತ ಪಕ್ಷವು 543 ಲೋಕಸಭಾ ಸ್ಥಾನಗಳಲ್ಲಿ 370 ಸ್ಥಾನಗಳನ್ನು ಗೆಲ್ಲುವ ಬೃಹತ್ ಗುರಿಯನ್ನು ಹೊಂದಿದೆ ಮತ್ತು ಎನ್‍ಡಿಎಗೆ 400 ಸ್ಥಾನಗಳನ್ನು ಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ಪ್ರಧಾನಿ ಮೋದಿ ಈಗ ವಾರಾಣಸಿಯಿಂದ ಸಂಸದರಾಗಿದ್ದಾರೆ. ಅಲ್ಲಿ ಅವರು 2 ಬಾರಿ ಗೆದ್ದಿದ್ದಾರೆ. ಅವರು 2014ರಲ್ಲಿ 3.37 ಲಕ್ಷ ಮತ ಮತ್ತು 2019ರಲ್ಲಿ 4.8 ಲಕ್ಷದ ಭಾರೀ ಅಂತರದಿಂದ ಗೆದ್ದಿದ್ದರು. ಅಮಿತ್ ಶಾ 2019ರ ಚುನಾವಣೆಯಲ್ಲಿ ಮೊದಲ ಬಾರಿ ಲೋಕಸಭೆಗೆ ಗಾಂಧಿನಗರದಿಂದ ಸ್ಪರ್ಧಿಸಿ ಗೆದ್ದಿದ್ದರು. ಅದು ಹಿರಿಯ ನೇತಾರ ಎಲ್.ಕೆ.ಅಡ್ವಾಣಿ ಅವರ ಸಾಂಪ್ರದಾಯಿಕ ಕ್ಷೇತ್ರವಾಗಿತ್ತು.