ಸಮಗ್ರ ನ್ಯೂಸ್: ಫೆ. 29ರಿಂದ ಮಾ.9ರವರೆಗೆ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ, ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಸಾರಸ್ ಮೇಳ ಮತ್ತು ಬೃಹತ್ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ವಿಕಾಸಸೌಧದಲ್ಲಿ ಸಾರಸ್ ಮೇಳ 2024 ಮತ್ತು ಅಕ್ಕ ಕೆಫೆ ಲೋಗೋ ಅನಾವರಣಗೊಳಿಸಿದರು.
ಬ್ರಾಂಡ್ ಬೆಂಗಳೂರು ಅಭಿಯಾನದಡಿಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರ ಗಣ್ಯರು ಮೇಳವನ್ನು ಉದ್ಘಾಟಿಸಲಿದ್ದಾರೆ.
ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ 10 ದಿನಗಳ ಈ ರಾಷ್ಟ್ರೀಯ ಮಟ್ಟದ ಮೇಳ ನಡೆಯಲಿದೆ. ಮೇಳದಲ್ಲಿ ಬೇರೆ ರಾಜ್ಯಗಳ100 ಮಹಿಳಾ ಸ್ವಸಹಾಯಕರು, ನಮ್ಮ ರಾಜ್ಯದ 150 ಮಹಿಳಾ ಸ್ವಸಹಾಯಕರು ಮಳಿಗೆಯನ್ನು ಹಾಕುತ್ತಿದ್ದಾರೆ ಎಂದು ಪಾಟೀಲ್ ಮಾಹಿತಿ ನೀಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಈ ರೀತಿಯ ಕರಕುಶಲ ವಸ್ತು ಪ್ರದರ್ಶನ ಬೆಂಗಳೂರಿನಲ್ಲಿ ಇಡೀ ವರ್ಷ ನಡೆಯಲು ಅನುಕೂಲವಾಗುವಂತೆ ಶಾಶ್ವತ ಪ್ರದರ್ಶನ ಕೇಂದ್ರಕ್ಕೆ ಸ್ಥಳಾವಕಾಶ ಕಲ್ಪಿಸಲು ಹುಡುಕಾಟ ನಡೆಯುತ್ತಿದೆ.