Ad Widget .

ಮಧ್ಯದ ಅಮಲಿನಲ್ಲಿ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಕೊಲೆ| ಆರೋಪಿಗಳ ಬಂಧನ

ಸಮಗ್ರ ನ್ಯೂಸ್: ಕುಡಿದ ಮತ್ತಿನಲ್ಲಿ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಇಬ್ಬರನ್ನು ಬಂಧಿಸಿದ ಘಟನೆ ದೇವರಚಿಕ್ಕನಹಳ್ಳಿಯಲ್ಲಿ ನಡೆದಿದೆ.

Ad Widget . Ad Widget .

ಮೃತ ಆನಂದ್‌ (32) ಹತ್ಯೆ ಸಂಬಂಧ ಮೃತನ ಮನೆ ಮಾಲಿಕ ಮಹೇಂದ್ರ ಹಾಗೂ ಆತನ ಸ್ನೇಹಿತ ಹರ್ಷಿತ್‌ನನ್ನು ಬಂಧಿಸಲಾಗಿದೆ. ಬೇಗೂರು ಸಮೀಪದ ಬಾರ್‌ನಲ್ಲಿ ಫೆ 22ರಂದು ಬೆಳಗ್ಗೆ ಮದ್ಯ ಸೇವಿಸಿದ ಬಳಿಕ ಮಹೇಂದ್ರ ಹಾಗೂ ಆನಂದ್ ಮಧ್ಯೆ ಜಗಳವಾಗಿದೆ. ಇದರಿಂದ ಕೋಪಗೊಂಡ ಮಹೇಂದ್ರ, ತನ್ನ ಸ್ನೇಹಿತ ಹರ್ಷಿತ್ ಜತೆ ಸೇರಿಕೊಂಡು ಆನಂದ್‌ ಮೇಲೆ ಹಲ್ಲೆ ನಡೆಸಿ ಹತ್ಯೆಗೈದು ರಸ್ತೆ ಬದಿ ಆತನನ್ನು ಎಸೆದು ಹೋಗಿದ್ದರು. ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದರಾದರು ತೀವ್ರ ರಕ್ತಸ್ರಾವದಿಂದ ಆನಂದ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Ad Widget . Ad Widget .

ಮಂಡ್ಯ ಜಿಲ್ಲೆ ಬಸರಾಳು ಗ್ರಾಮದ ಆನಂದ್‌, ಬೇಗೂರು ಬಳಿಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಹೋಟೆಲ್‌ ಸಮೀಪದಲ್ಲೇ ಇದ್ದ ಮಹೇಂದ್ರನ ಮನೆಯಲ್ಲಿ ಆನಂದ್‌ ನೆಲೆಸಿದ್ದ. ಹಲವು ವರ್ಷಗಳಿಂದ ಆನಂದ್ ಹಾಗೂ ಆತನ ಸೋದರನಿಗೆ ಮಹೇಂದ್ರ ಪರಿಚಿತನಾಗಿದ್ದು, ಈ ಗೆಳೆತನದಲ್ಲಿ ಆಗಾಗ್ಗೆ ಮದ್ಯ ಪಾರ್ಟಿ ನಡೆಯುತ್ತಿದ್ದವು. ಇತ್ತೀಚಿಗೆ ತಾನು ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿ ಪಾತ್ರೆಗಳನ್ನು ಕಳವು ಮಾಡಿದ ಆರೋಪ ಆನಂದ್ ಮೇಲೆ ಕೇಳಿ ಬಂದಿತ್ತು. ಇದೇ ವಿಚಾರವಾಗಿ ತಿಳಿದು ಆತನಿಗೆ ಮಹೇಂದ್ರ ಬುದ್ಧಿಮಾತು ಹೇಳಿದ್ದ.

ಮನೆ ಸಮೀಪ ಬಾರ್‌ಗೆ ಗುರುವಾರ ಬೆಳಗ್ಗೆ 9 ಗಂಟೆಗೆ ಮಹೇಂದ್ರ ಹಾಗೂ ಸ್ನೇಹಿತ ರಾಮು ಜತೆ ಆನಂದ್ ಮದ್ಯ ಸೇವನೆ ತೆರಳಿದ್ದ. ಆಗ ಮೂರು ತಾಸು ಬಾರ್‌ನಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ ಬಳಿಕ ಪಾತ್ರೆ ಕಳ್ಳತನ ವಿಚಾರ ಪ್ರಸ್ತಾಪಿಸಿ ಆನಂದ್‌ಗೆ ಮಹೇಂದ್ರ ಬೈದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆನಂದ್‌, ಮಹೇಂದ್ರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಪೆಟ್ಟು ತಿಂದು ಕೆರಳಿದ ಮಹೇಂದ್ರ, ತನ್ನ ಸ್ನೇಹಿತ ಹರ್ಷಿತ್‌ಗೆ ಕರೆ ಮಾಡಿ ನೆರವಿಗೆ ಕರೆಸಿಕೊಂಡಿದ್ದಾನೆ. ಈ ಗಲಾಟೆ ಬಳಿಕ ಅಲ್ಲಿಂದ ರಾಮು ತೆರಳಿದ್ದಾನೆ. ಅನಂತರ ಬಾರ್‌ನಿಂದ ಬೈಕ್‌ನಲ್ಲಿ ಕೂರಿಸಿಕೊಂಡು ಹುಳಿಮಾವು ಸಮೀಪದ ಗುಡ್ಡಕ್ಕೆ ಆರೋಪಿಗಳು ಕರೆದೊಯ್ದಿದ್ದಾರೆ. ಅಲ್ಲಿ ದೊಣ್ಣೆಯಿಂದ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ನಂತರ ಕರೆತಂದು ಬೇಗೂರು ಸಮೀಪ ರಸ್ತೆ ಬದಿ ಆನಂದ್‌ನನ್ನು ಬಿಸಾಡಿ ಆರೋಪಿಗಳು ಪರಾರಿಯಾಗಿದ್ದರು.

ಈ ಘಟನೆ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತ ಆನಂದ್ ಪೂರ್ವಾಪರ ವಿಚಾರಿಸಿದಾಗ ಆರೋಪಿಗಳ ಜಾಡು ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Leave a Comment

Your email address will not be published. Required fields are marked *