ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ರಾಮಮಂದಿರ
ಪ್ರಾಣ ಪ್ರತಿಷ್ಠಾನೆಗೊಂಡಿರುವ ಬಾಲರಾಮನ ಮೂರ್ತಿಯನ್ನು ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಡಾ. ಹಿರೇಮಠ ಫೌಂಡೇಶನ್ ಹಾಗೂ ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆ ಸಹಯೋಗದಲ್ಲಿ “ಅಭಿನವ ಅಮರ ಶಿಲ್ಪಿ” ಬಿರುದು ಘೋಷಣೆಯಾಗಿದೆ.

ಮಾರ್ಚ್ 4ರಂದು ಕಾರವಾರ ನಗರದ ಸಾಗರ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯವ ಕಾರ್ಯಕ್ರಮದಲ್ಲಿ ಬಿರುದು ನೀಡಿ ಗೌರವಿಸಲಾಗುವುದು ಎಂದು ಡಾ. ಹಿರೇಮಠ ಫೌಂಡೇಶನ್ನ ಸಂಸ್ಥಾಪಕ ಡಾ. ವಿಶ್ವನಾಥ ಹಿರೇಮಠ ಅವರು ತಿಳಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ರಾಮ ಮಂದಿರ ಭಾರತೀಯರ 500 ವರ್ಷಗಳ ಕನಸು. ರಾಮ ಮಂದಿರದಲ್ಲಿರುವ ಸುಂದರ ರಾಮ ಲಲ್ಲಾ ಮೂರ್ತಿಯ ಕೆತ್ತನೆ ಮಾಡಿರುವುದು ನಮ್ಮ ಕರ್ನಾಟಕದ ಮೈಸೂರಿನವರೇ ಆದ ಅರುಣ್ ಯೋಗಿರಾಜ್ ಎಂಬುದು ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆ. ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಸ್ವಾಗತಿಸಿ ಸನ್ಮಾನಿಸಬೇಕೆಂಬುದು ನಮ್ಮ ಬಯಕೆಯಾಗಿದೆ,” ಎಂದು ಹೇಳಿದರು.