Ad Widget .

‘ಬಜೆಟ್‌ನಲ್ಲಿ ಏನಿಲ್ಲ’ ಎನ್ನುವ ಬಿಜೆಪಿಯವರ ಮೆದುಳಿನಲ್ಲಿ ಏನೂ ಇಲ್ಲ: ಸಿದ್ದು

ಸಮಗ್ರ ನ್ಯೂಸ್: ‘ಕೇಂದ್ರದಿಂದ ನಿರಂತರ ಆರ್ಥಿಕ ಅನ್ಯಾಯ ಹಾಗೂ ನಮ್ಮ ಪಾಲಿನ ತೆರಿಗೆಯ ಪಾಲು ನೀಡದೆ ದೌರ್ಜನ್ಯ ಎಸಗಿದ್ದರೂ ಗ್ಯಾರಂಟಿಗಳ ಜತೆಗೆ ಅಭಿವೃದ್ಧಿಗೆ ಒತ್ತು ನೀಡಿ ವಿತ್ತೀಯ ಶಿಸ್ತಿನ ಅಡಿ ಬಜೆಟ್‌ ಮಂಡನೆ ಮಾಡಿದ್ದೇನೆ. ಹೀಗಿದ್ದರೂ ‘ಬಜೆಟ್‌ನಲ್ಲಿ ಏನಿಲ್ಲ’ ಎನ್ನುವ ಬಿಜೆಪಿಯವರ ಮೆದುಳಿನಲ್ಲಿ ಏನೂ ಇಲ್ಲ. ಅವರ ತಲೆಯ ತುಂಬಾ ರಾಜಕೀಯ ಮಂಜು ಕವಿದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Ad Widget . Ad Widget .

ನಾನು ಕೇಂದ್ರ ಸರ್ಕಾರದ ವಿರುದ್ಧದ ಅನ್ಯಾಯವನ್ನು ಪ್ರಸ್ತಾಪಿಸಿದ್ದಕ್ಕೆ ಕುಳಿತುಕೊಂಡು ಕೇಳಲಾಗದೆ ಬೆಂಕಿಯಲ್ಲಿ ಬಿದ್ದ ಹುಳುವಿನಂತೆ ವಿಲ ವಿಲ ಒದ್ದಾಡಿ ಎದ್ದು ಹೋಗಿಬಿಟ್ಟರು. ಇದು ನಮ್ಮ ಬಜೆಟ್‌ ವಿರುದ್ಧ ಮಾಡಿದ ಸಭಾತ್ಯಾಗ ಅಲ್ಲ. ಕೇಂದ್ರದ ಅನ್ಯಾಯವನ್ನು ಪ್ರಸ್ತಾಪಿಸಿದ್ದನ್ನು ತಡೆಯಲಾಗದೆ ಮಾಡಿದ ಸಭಾತ್ಯಾಗ ಎಂದು ಟೀಕಿಸಿದರು. ಎಚ್.ಡಿ. ಕುಮಾರಸ್ವಾಮಿಯೂ ಅವರ ಜತೆ ಸೇರಿಕೊಂಡು ಸಭಾತ್ಯಾಗ ಮಾಡಿದ್ದಾರೆ. ಅವರು ಬಿಜೆಪಿಯ ಅಧಿಕೃತ ವಕ್ತಾರ ಆಗಿಬಿಟ್ಟಿದ್ದಾರೆ. ಇವರಿಗೆ ಬಜೆಟ್‌ ಎಂದರೆ ಏನು? ಬಜೆಟ್‌ ಮೂಲಕ ಏನು ಮಾಡಬೇಕು ಎಂಬುದೇ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.

Ad Widget . Ad Widget .

3,71,383 ಕೋಟಿ ರು. ಗಾತ್ರದ ಬಜೆಟ್‌ ಮಂಡಿಸಲಾಗಿದೆ. ಕಳೆದ ವರ್ಷಕ್ಕಿಂತ ಶೇ.13 ರಷ್ಟು ಬಜೆಟ್‌ ಗಾತ್ರ ಹೆಚ್ಚಾಗಿದೆ. ರಾಜ್ಯವು ಗ್ಯಾರಂಟಿಗಳಿಂದ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಬಿಜೆಪಿಯವರು ಟೀಕಿಸಿದ್ದರು. ಇದೀಗ ರಾಜ್ಯದಲ್ಲಿ ಬರ ಆವರಿಸಿ ಕೇಂದ್ರವು ನಯಾಪೈಸೆ ನೆರವು ನೀಡದಿದ್ದರೂ ಪ್ರಸಕ್ತ ಸಾಲಿನಲ್ಲಿ 52,009 ಕೋಟಿ ರು. ಗ್ಯಾರಂಟಿ ಯೋಜನೆಗಳಿಗೆ ಒದಗಿಸಿದ್ದೇನೆ. ತನ್ಮೂಲಕ ಪ್ರತಿ ಕುಟುಂಬಕ್ಕೆ 4-5 ಸಾವಿರ ಪ್ರತಿ ತಿಂಗಳು ತಲುಪಲಿದೆ. ಇದರ ಜತೆಗೆ 1.20 ಲಕ್ಷ ಕೋಟಿ ರು.ಗಳಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ನೀಡಿದ್ದೇವೆ. ಹೀಗಿದ್ದರೂ ಬಿಜೆಪಿಯವರು ವಿನಾಕಾರಣ ರಾಜಕೀಯ ಕಾರಣಕ್ಕೆ ಸಭಾತ್ಯಾಗ ಮಾಡಿದ್ದಾರೆ. ತನ್ಮೂಲಕ ಬಡವರಿಗೆ ಅವಮಾನ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಬಿಜೆಪಿಯ ಪೂರ್ವನಿಯೋಜಿತ ಷಡ್ಯಂತ್ರ: ನಾನಿನ್ನೂ ಬಜೆಟ್‌ ಭಾಷಣ ಓದಲು ಶುರು ಮಾಡುವ ಮೊದಲೇ ಮಾಜಿ ಸಚಿವ ಸುನಿಲ್‌ಕುಮಾರ್‌, ‘ಏನಿಲ್ಲ ಏನಿಲ್ಲ ಬಜೆಟ್‌ನಲ್ಲಿ ಏನಿಲ್ಲ’ ಎನ್ನುತ್ತಾರೆ. ಇದರಿಂದ ಅವರ ತಲೆಯಲ್ಲೇ ಏನೂ ಇಲ್ಲದೆಂದು ಸಾಬೀತಾಯಿತು. ಅವರ ತಲೆ ಪೂರ್ತಿ ರಾಜಕೀಯ ಮಂಜು ಕವಿದಿದೆ. ಕಾಮಾಲೆ ರೋಗದವರಿಗೆ ಕಾಣುವುದೆಲ್ಲಾ ಹಳದಿ ಎಂಬಂತಾಗಿದೆ. ಭಿತ್ತಿಪತ್ರಗಳೊಂದಿಗೆ ಸಿದ್ಧರಾಗಿ ಬಂದಿದ್ದಾರೆ ಎಂದರೆ ಇದು ಪೂರ್ವನಿಯೋಜಿತ ಷಡ್ಯಂತ್ರ ಅಲ್ಲವೇ? ಸಂಸದೀಯ ವ್ಯವಸ್ಥೆ ವಿರೋಧಿ ನಡೆ ಅಲ್ಲವೇ? ಎಂದು ವಾಗ್ದಾಳಿ ನಡೆಸಿದರು.

ಕೇಂದ್ರದಿಂದ ತೀವ್ರ ಅನ್ಯಾಯ: ಬರಗಾಲದಿಂದ ರಾಜ್ಯದಲ್ಲಿ 35 ಸಾವಿರ ಕೋಟಿ ರು. ನಷ್ಟ ಉಂಟಾಗಿದ್ದು 18,171 ಕೋಟಿ ರು. ಬರ ಪರಿಹಾರಕ್ಕೆ ಮನವಿ ಮಾಡಿ ಐದು ತಿಂಗಳಾದರೂ ನಯಾಪೈಸೆ ಬಿಡುಗಡೆಯಾಗಿಲ್ಲ. ಭದ್ರಾ ಮೇಲ್ದಂಡೆಗೆ 5,300 ಕೋಟಿ ರು. ನೀಡುವುದಾಗಿ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲೇ ಹೇಳಿಯೂ ನೀಡಿಲ್ಲ. ಈ ಬಗ್ಗೆ ಬೊಮ್ಮಾಯಿ ಬಜೆಟ್‌ನಲ್ಲೂ ಹೇಳಿದ್ದರು. ಬೆಂಗಳೂರು ಅಭಿವೃದ್ಧಿಗೆ ತಿಳಿಸಿದ್ದ 6 ಸಾವಿರ ಕೋಟಿ ರು. ನೀಡಿಲ್ಲ. ಇದನ್ನು ಬಜೆಟ್‌ ಮೂಲಕ ಜನರಿಗೆ ಹೇಳುವುದು ತಪ್ಪೇ? ಎಂದು ಪ್ರಶ್ನಿಸಿದರು.

ಇದರಲ್ಲಿ ಏನಾದರೂ ಸುಳ್ಳು ಇದ್ದರೆ ವಸ್ತುನಿಷ್ಠವಾಗಿ ಚರ್ಚೆಗೆ ಬರಲಿ. ನಾನು ಬೊಮ್ಮಾಯಿ ಅವರು ತಮ್ಮ ಬಜೆಟ್‌ನಲ್ಲಿ ಹೇಳಿದ್ದನ್ನೇ ಹೇಳಿದ್ದೇನೆ ಎಂದರು. ಬೋಗಸ್‌ ಬಜೆಟ್ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ, ಕಳೆದ ವರ್ಷ ನಾನು ಗ್ಯಾರಂಟಿಗಳಿಗೆ 36,000 ಕೋಟಿ ರು. ಹಾಗೂ ಅಭಿವೃದ್ದಿ ಕೆಲಸಗಳಿಗೆ ಹಣ ನೀಡಿಲ್ಲ ಎಂದು ಹೇಳಲಿ. ಈ ವರ್ಷವೂ 52 ಸಾವಿರ ಕೋಟಿ ರು. ಗ್ಯಾರಂಟಿ ಯೋಜನೆಗಳಿಗೆ ಹಾಗೂ 1.20 ಲಕ್ಷ ಕೋಟಿ ರು. ಅಭಿವೃದ್ದಿ ಕಾಮಗಾರಿಗಳಿಗೆ ನೀಡಿದ್ದೇನೆ ಬೇಕಿದ್ದರೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ವಿತ್ತೀಯ ಶಿಸ್ತಿನ ಅಡಿಯಲ್ಲೇ ಸಾಲ: 1.05 ಲಕ್ಷ ಕೋಟಿ ರು. ಸಾಲ ಮಾಡಿರುವುದನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿತ್ತೀಯ ಶಿಸ್ತು ಅಧಿನಿಯಮದ ಅಡಿಯಲ್ಲೇ ಸಾಲ ಮಾಡಲಾಗಿದೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳಿಂದ ಈ ಬಾರಿ ಕೊರತೆ ಬಜೆಟ್‌ ಉಂಟಾಗಿರುವುದು ಸತ್ಯ. ಮುಂದಿನ ವರ್ಷದಿಂದ ಉಳಿತಾಯ ಬಜೆಟ್‌ ಆಗಲಿದೆ. 1.05 ಲಕ್ಷ ಕೋಟಿ ರು. ಸಾಲ ಮಾಡಿದ್ದರೂ ಜಿಡಿಪಿಯ ಶೇ.0.97ರಷ್ಟರ ಮಿತಿಯಲ್ಲೇ ಇದೆ. ಒಟ್ಟು ರಾಜ್ಯ ಆಂತರಿಕ ಉತ್ಪನ್ನದ ಶೇ.23.68 ರಷ್ಟು ಮಾತ್ರ ಸಾಲ ಮಾಡಿದ್ದು, ನಿಯಮಗಳಲ್ಲೇ ಶೇ.25ರವರೆಗೆ ಸಾಲ ಮಾಡಲು ಅವಕಾಶವಿದೆ. ನಾವು ಜಿಡಿಪಿಯ ಶೇ.0.97ರಷ್ಟು ಸಾಲ ಮಾಡಿದ್ದರೆ ಕೇರಳ ಶೇ.2.1, ರಾಜಸ್ತಾನ ಶೇ.1.4, ಆಂಧ್ರಪ್ರದೇಶ 1.6 ಹಾಗೂ ಕೇಂದ್ರ ಸರ್ಕಾರ ಶೇ.2 ರಷ್ಟು ಸಾಲ ಮಾಡಿದೆ. ಕೇಂದ್ರ ಸರ್ಕಾರವು 2024-25ರ 40 ಲಕ್ಷ ಕೋಟಿ ರು. ಬಜೆಟ್‌ನಲ್ಲಿ 17 ಲಕ್ಷ ಕೋಟಿ ರು. ಸಾಲ ಮಾಡಿದ್ದಾರೆ. ಕೇಂದ್ರಕ್ಕಿಂತ ಬಹಳಷ್ಟು ಪಾಲು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ಹೇಳಿದರು.

ಅಲ್ಪಸಂಖ್ಯಾತರಿಗೆ 1% ಮಾತ್ರ ಅನುದಾನ: ಸದನದಲ್ಲಿ ಬಿಜೆಪಿಯವರು ದಕ್ಷಿಣ ಕನ್ನಡ ತೆರಿಗೆ ಮುಸ್ಲೀಮರ ಮನೆಗೆ ಎಂಬ ಭಿತ್ತಿಪತ್ರ ಪ್ರದರ್ಶನ ಮಾಡಿದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಅಲ್ಪಸಂಖ್ಯಾತರಿಗೆ ನಾವು 3 ಸಾವಿರ ಕೋಟಿ ರು. ಮಾತ್ರ ನೀಡಿದ್ದೇವೆ. ಅಂದರೆ ಬಜೆಟ್‌ ಗಾತ್ರದ ಶೇ.1 ಕ್ಕಿಂತ ಕಡಿಮೆ ನೀಡಿದ್ದೇವೆ. ಇದರಲ್ಲಿ ಕ್ರಿಶ್ಚಿಯನ್ನರು, ಜೈನರು, ಬೌದ್ಧರು, ಪಾರ್ಸಿಗಳು ಎಲ್ಲರೂ ಸೇರಿದ್ದಾರೆ. ಎಸ್ಸಿಪಿ-ಟಿಎಸ್‌ಪಿ ಇರುವುದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಬರೋಬ್ಬರಿ 39 ಸಾವಿರ ಕೋಟಿ ರು. ನೀಡಿದ್ದೇವೆ. ಇದರಿಂದ ಅವರದ್ದು ಕಾಮಾಲೆ ಕಣ್ಣು ಎಂದು ಸಾಬೀತಾಗುತ್ತದೆ ಎಂದರು.

Leave a Comment

Your email address will not be published. Required fields are marked *