ಸಮಗ್ರ ನ್ಯೂಸ್: ಕಾಸರಗೋಡು ಜಿಲ್ಲೆಯ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಮಾರ್ಚ್ 1ರಿಂದ 7ರವರೆಗೆ ಕಳಿಯಾಟ ಮಹೋತ್ಸವ ನಡೆಯಲಿದೆ ಎಂದು ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಉದ್ದಂತಡ್ಕ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.
ಪಾಟಾಳಿ ಯಾನೆ ಗಾಣಿಗರ ಸಂಘದ ವತಿಯಿಂದ ಪರ್ನೆ ಕಳಿಯಾಟ ಮಹೋತ್ಸವದ ಕುರಿತು ಫೆ. 16ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಹೇಳಿದರು.
ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ನಡೆದು 20 ವರ್ಷಗಳು ಕಳೆದಿದೆ. ಇದೀಗ ಮಾ.1ರಿಂದ 7ರವರೆಗೆ ಉತ್ಸವ ನಡೆಯಲಿದೆ. ಮಾ. 1 ರಂದು ಉಗ್ರಾಣ ತುಂಬಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆತು, ಆ ಬಳಿಕ ಉತ್ಸವಗಳು ನಡೆಯುವುದು. ಮಾ.3ರಂದು ಬೀರ್ಣಾಳ ದೈವದ ನರ್ತನ ಸೇವೆ, ಪ್ರಸಾದ ವಿತರಣೆ. ಮತ್ತು ಮಾ.4, 5 ಹಾಗೂ 6ರಂದು ಸಹ ದೇವರ ಕಾರ್ಯಕ್ರಮ ನಡೆದು, ಮಾ. 3ರಂದು ಶ್ರೀ ಮುಚ್ಚಿಲೋಟ್ ಭಗವತೀ ಅಮ್ಮನವರ ಸಿರಿಮುಡಿ ದರ್ಶನ ಪುಲ್ಲೂರ್ ಕಾಳಿ ದೈವದೊಂದಿಗೆ ಭೇಟಿ, ಪ್ರಸಾದ ವಿತರಣೆ ನಡೆಯುವುದು ಎಂದು ಅವರು ಹೇಳಿದರು.
ಮಾ.3ರಂದು ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆ ಮಾಡಲಿದ್ದೇವೆ. ಅಂದು ಬೆಳಗ್ಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ವಾಹನ ಮೆರವಣಿಗೆ ಆರಂಭಗೊಳ್ಳುವುದು. ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತಸರ ಡಾ. ಹರಪ್ರಸಾದ್ ತುದಿಯಡ್ಕರು ಚಾಲನೆ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಸಿರುವಾಣಿ ಸಮರ್ಪಣಾ ಸಮಿತಿ ಗೌರವ ಸಂಚಾಲಕ ಕಿರಣ್ ಬಿಳಿಯಾರು, ಸಹ ಸಂಚಾಲಕ ಪ್ರದೀಪ್ ಪೆರಾಜೆ, ಲೆಕ್ಕಪರಿಪಾಲಕ ಚಂದ ಪಾಟಾಲಿ ಕುಡೆಕಲ್ಲು, ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ, ಖಜಾಂಜಿ ವಿಜಯ ಎರ್ಮಟ್ಟಿ, ಜತೆ ಕಾರ್ಯದರ್ಶಿ ಸೌಮ್ಯ ರಮೇಶ್, ಮಹಿಳಾ ಸಮಿತಿ ಸಂಚಾಲಕಿ ಪ್ರೇಮ ಚಂದ ಕುಡೆಕಲ್ಲು, ಹಸಿರುವಾಣಿ ಸಮಿತಿ ಪ್ರತಿನಿಧಿ ನಾರಾಯಣ ಎಸ್. ಎಮ್. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತಾಲೂಕು ಸಮಿತಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ ಸ್ವಾಗತಿಸಿ, ವಂದಿಸಿದರು.