ಸಮಗ್ರ ನ್ಯೂಸ್: ಪ್ರತಿಷ್ಠಿತ ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕ್ ಚುನಾವಣೆಗೆ 2024ರ ಮಾರ್ಚ್ 11 ರಂದು ದಿನಾಂಕ ನಿಗದಿಯಾಗಿದ್ದು, ಸಹಕಾರ ಕ್ಷೇತ್ರದಲ್ಲಿ ಮತ್ತೊಂದು ಕದನಕ್ಕೆ ಕಣ ಸಜ್ಜಾಗಿದೆ. ಈ ಕುರಿತಂತೆ ಈಗಾಗಲೇ ಚುನಾವಣಾ ಅಧಿಸೂಚನೆ ಹೊರಡಿಸಲಾಗಿದ್ದು, ಉಭಯ ಜಿಲ್ಲೆಗಳ ಒಟ್ಟು ಹದಿಮೂರು ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.
ಕಳೆದ ಚುನಾವಣೆಯಲ್ಲಿ ಬಹುಮತವಿದ್ದರೂ ಬಹುದೊಡ್ಡ ಆಘಾತ ಅನುಭವಿಸಿದ್ದ ಸಹಕಾರ ಭಾರತಿ ಸುಳ್ಯ ಕ್ಷೇತ್ರದಲ್ಲಿ ಈ ಬಾರಿ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ.
ಸಹಕಾರ ಭಾರತಿ ಹಾಗೂ ಡಾ. ರಾಜೇಂದ್ರ ಕುಮಾರ್ ಬಣಗಳ ನಡುವೆ ಮತ್ತೊಂದು ಜಿದ್ದಾಜಿದ್ದಿನ ಹೋರಾಟ ನಡೆಯುವ ಲಕ್ಷಣಗಳು ಕಂಡುಬರುತ್ತಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಅಭ್ಯರ್ಥಿ ಹೆಚ್ಚಿನ ಬಹುಮತವಿದ್ದು ಸೋಲನ್ನು ಅನುಭವಿಸಿತು. ಕಾನತ್ತೂರು ಅಣೆ ಪ್ರಮಾಣ, ಸ್ವಾಭಿಮಾನಿ ಗುಂಪು, ಉಚ್ಚಾಟನೆ, ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆ, ಹೀಗೆ ಆ ಒಂದು ಸೋಲು ಇಂದಿನವರೆಗೆ ಬಿಜೆಪಿಗೆ ಅರಗಿಸಲಾಗದ ತುತ್ತಾಗಿದೆ.
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ವೆಂಕಟ್ ದಂಬೆಕೋಡಿ ಹಾಗೂ ಕಾಂಗ್ರೆಸ್ ಬೆಂಬಲಿತ ಕೆ.ಎಸ್ ದೇವರಾಜ್ ನಡುವೆ ಸುಳ್ಯ ಕ್ಷೇತ್ರದಲ್ಲಿ ಸ್ಪರ್ಧೆ ನಡೆದಿತ್ತು. ಇದರಲ್ಲಿ ಬಹುಮತವಿದ್ದರೂ ಅಡ್ಡಮತದಾನದ ಪರಿಣಾಮ ಕೆ.ಎಸ್ ದೇವರಾಜ್ ಜಯಗಳಿಸಿದ್ದರು. ಬಳಿಕ ಅವರ ನಿಧನದ ನಂತರ ಸ್ಥಾನ ಹಾಗೆ ಖಾಲಿ ಉಳಿದಿತ್ತು.
ಈ ಬಾರಿ ರಾಜೇಂದ್ರ ಕುಮಾರ್ ಬಣ ಮತ್ತು ಸಹಕಾರ ಭಾರತಿ ಕೊಡುಕೊಳ್ಳುವಿಕೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಕಳೆದ ಬಾರಿ ಸಹಕಾರ ಭಾರತಿ ಧೈರ್ಯದಿಂದ ಸ್ಪರ್ಧಾ ಕಣಕ್ಕೆ ಇಳಿದರು ಚುನಾವಣೆಯಲ್ಲಿ ಒಂದು ಸ್ಥಾನ ಗಳಿಸಲು ಶಕ್ತವಾಗಿಲ್ಲ. ರಾಜೇಂದ್ರ ಕುಮಾರ್ ಡಿಸಿಸಿ ಬ್ಯಾಂಕ್ ಮಟ್ಟಿಗೆ ಪ್ರಬಲವಾಗಿದ್ದು ಅನೇಕ ಬಿಜೆಪಿ ಕಾರ್ಯಕರ್ತರು ಡಿಸಿಸಿ ಚುನಾವಣೆ ಉಸ್ತುವಾರಿ ಆಯಾ ಕ್ಷೇತ್ರ ಶಾಸಕರಿಗೆ ನೀಡಿ ಗೆಲ್ಲಿಸಿ ಬರುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ.
ಇತ್ತ ರಾಜೇಂದ್ರ ಕುಮಾರ್ ಎದುರು ಪ್ರಬಲವಾಗಿ ನಿಲ್ಲುವ ಶಕ್ತಿ ಸದ್ಯಕ್ಕಂತೂ ಯಾರಿಗೂ ಕಾಣುತ್ತಿಲ್ಲ. ಕಳೆದ ಚುನಾವಣೆ ನಂತರ ವ್ಯಕ್ತಿ, ಸಂಘಟನೆಗಳ ನಡುವಿನ ಅಂತರ ಹೆಚ್ಚಾಗಿದ್ದು ಬಿಜೆಪಿಯ ನಿಲುವಿನ ಮೇಲೆ ಡಿಸಿಸಿ ಚುನಾವಣೆ ಕುತೂಹಲ ಕೆರಳಿಸಿದೆ. ರಾಜೇಂದ್ರ ಕುಮಾರ್ ಬಣ ಮತ್ತೊಮ್ಮೆ ಡಿಸಿಸಿ ಬ್ಯಾಂಕ್ ಗದ್ದುಗೆ ಏರಲು ತಯಾರಿ ನಡೆಸುತ್ತಿದೆ. ಇದಕ್ಕಾಗಿ ತೆರೆಮರೆಯ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾತುಗಳನ್ನು ಅಲ್ಲಗೆಳಯುವಂತಿಲ್ಲ.